RIPPONPETE | ಇಷ್ಟಾರ್ಥ ಸಿದ್ಧಿಗೆ ಗಣಪನಿಗೆ ₹1.50 ಲಕ್ಷ ಮೌಲ್ಯದ 320 ಗ್ರಾಂ ಬೆಳ್ಳಿ ಹಾರ ಅರ್ಪಿಸಿದ ಶೈಲಜಾ ಶಾನಭೋಗ್
Shailaja Shanabhog of Sagara Road offered a 320-gram silver garland worth around ₹1.50 lakh to Lord Ganesha during the 59th annual Ganeshotsava of Karnataka Pranteeya Hindu Rashtra Sena Seva Samiti.
ಸಾಗರ (Sagara): ತಮ್ಮ ಮನದ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ ಗಣೇಶನಿಗೆ ಹರಕೆ ಹೊತ್ತಿದ್ದ ಇಲ್ಲಿನ ಸಾಗರ ರಸ್ತೆ ನಿವಾಸಿ ಶೈಲಜಾ ಶಾನಭೋಗ್ ಅವರು, ಗಣಪತಿಗೆ ಬರೋಬ್ಬರಿ ₹1.50 ಲಕ್ಷ ಮೌಲ್ಯದ, 320 ಗ್ರಾಂ ತೂಕದ ಸುಂದರ ಬೆಳ್ಳಿ ಹಾರವನ್ನು ಭಕ್ತಿಯಿಂದ ಸಮರ್ಪಿಸಿದ್ದಾರೆ.
ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸೇವಾ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಈ ವಿಶೇಷ ಭಕ್ತಿ ಸಮರ್ಪಣೆ ನಡೆದಿದೆ.
ಬೆಳ್ಳಿ ಹಾರವನ್ನು ದೇವರಿಗೆ ಅರ್ಪಿಸುವ ಮುನ್ನ ಶಾಸ್ತ್ರೋಕ್ತವಾಗಿ ವೈದಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬಳಿಕ ಮಂತ್ರಘೋಷಗಳ ನಡುವೆ ಗಣೇಶನ ಮೂರ್ತಿಗೆ ಹಾರವನ್ನು ಧಾರಣೆ ಮಾಡಲಾಯಿತು. ಪೂಜಾ ಕಾರ್ಯಕ್ರಮದ ನಂತರ ಮಹಾಮಂಗಳಾರತಿ ನೆರವೇರಿಸಿ, ನೆರೆದಿದ್ದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿತರಿಸಲಾಯಿತು.
ಹರಕೆ ತೀರಿಸಿದ ಬಗ್ಗೆ ಮಾತನಾಡಿದ ಶೈಲಜಾ ಶಾನಭೋಗ್ ಅವರು, ವಿಘ್ನನಿವಾರಕನ ಕೃಪೆಯಿಂದ ತಮ್ಮ ಸಂಕಲ್ಪ ಈಡೇರಿದ್ದು, ಭಕ್ತಿಯಿಂದ ಈ ಕಾಣಿಕೆ ನೀಡಿರುವುದಾಗಿ ಹರ್ಷ ವ್ಯಕ್ತಪಡಿಸಿದರು.
ಭಕ್ತಿಯಿಂದ ಬೆಳ್ಳಿ ಹಾರ ಅರ್ಪಿಸಿದ ಶೈಲಜಾ ಶಾನಭೋಗ್ ಅವರನ್ನು ಇದೇ ವೇಳೆ ಸಮಿತಿಯ ವತಿಯಿಂದ ಗೌರವಿಸಲಾಯಿತು. ಸಮಿತಿಯ ಅಧ್ಯಕ್ಷರಾದ ಸುಧೀಂದ್ರ ಪೂಜಾರಿ, ಕಾರ್ಯದರ್ಶಿ ಆರ್.ಎಂ. ನವೀನ್ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಅವರನ್ನು ಸನ್ಮಾನಿಸಿದರು.
ಈ ಭಕ್ತಿಪೂರ್ವಕ ಕಾರ್ಯಕ್ರಮದಲ್ಲಿ ಎಂ.ಬಿ. ಮಂಜುನಾಥ, ಎಂ. ಸುರೇಶ್ ಸಿಂಗ್, ವೀರಭದ್ರಪ್ಪಗೌಡ, ಪದ್ಮಾ ಸುರೇಶ್, ರೇಖಾ ರವಿ, ಹೆಚ್.ಆರ್. ಅಶೋಕ, ಆರ್. ರಾಘವೇಂದ್ರ, ಯೋಗೇಶ್, ತೀರ್ಥೇಶ್, ಹೆಚ್.ಎನ್. ಚೋಳರಾಜ್, ನಾಗರಾಜ ಕೆದಲುಗುಡ್ಡೆ, ಡಿ.ಈ. ರವಿಭೂಷಣ, ಮಂಜುನಾಥ ಗವಟೂರು, ರಾಮಚಂದ್ರ ಬಳೆಗಾರ್, ಮುರುಳಿ ಕೆರೆಹಳ್ಳಿ, ಚಂದ್ರ ಸಿದ್ದಪ್ಪನಗುಡಿ, ಚಿಪ್ಪಳಿ ರಾಘವೇಂದ್ರ, ರವೀಂದ್ರ ಕೆರೆಹಳ್ಳಿ, ಶ್ರೀನಿವಾಸ್ ಆಚಾರ್, ರಾಜೇಶ್, ನಾಗರಾಜ್ ಪವಾರ್, ಸುಹಾಸ್, ವೈ.ಜೆ. ಕೃಷ್ಣ, ಬೇಕರಿ ನಾರಾಯಣ್, ಆರ್.ಈ. ಭಾಸ್ಕರ್ ಶೆಟ್ಟಿ, ಸಂದೀಪ್, ಪಿ. ಸುಧೀರ್ ಸೇರಿದಂತೆ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.