ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
Congress leaders in Sagar have hit back at BJP criticism over MLA Beluru Gopalakrishna’s absence from a Teachers’ Day programme, calling the controversy politically motivated.
ರಿಪ್ಪನ್ ಪೇಟೆ : ಶಿಕ್ಷಕರ ದಿನಾಚರಣೆ ಕಾರ್ಯಕ್ರಮಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಗೈರುಹಾಜರಾಗಿದ್ದ ವಿಚಾರವನ್ನೇ ಬಂಡವಾಳವಾಗಿಸಿಕೊಂಡು ಬಿಜೆಪಿ ನಾಯಕರು ಮಾಡುತ್ತಿರುವ ಟೀಕೆಗಳು ಸಂಪೂರ್ಣ ರಾಜಕೀಯ ದುರುದ್ದೇಶದಿಂದ ಕೂಡಿವೆ ಎಂದು ಕೆರೆಹಳ್ಳಿ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಈಶ್ವರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪಟ್ಟಣದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಹರತಾಳು ಹಾಲಪ್ಪ ಹಾಗೂ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಧಿಕಾರ ಕಳೆದುಕೊಂಡಿರುವ ಹತಾಶೆಯಿಂದ ಬಿಜೆಪಿ ನಾಯಕರು ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಗುರಿಯಾಗಿಸಿಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು. ತಮ್ಮ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳುವ ಉದ್ದೇಶದಿಂದಲೇ ಬಿಜೆಪಿ ನಾಯಕರು ಈ ರೀತಿಯ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕೆಡಿಪಿ ಸದಸ್ಯ ಆಸೀಫ್ ಭಾಷಾ ಮಾತನಾಡಿ, ಹರತಾಳು ಹಾಲಪ್ಪ ಅವರು ಬೇರೆಯವರತ್ತ ಬೊಟ್ಟು ಮಾಡುವ ಮುನ್ನ ತಮ್ಮ ಹಿಂದಿನ ಆಡಳಿತಾವಧಿಯ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿ , ಹಿಂದೆ ಹಾಲಪ್ಪ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಪಟ್ಟಣದ ಚಿನ್ನೆಗೌಡ ಕ್ರೀಡಾಂಗಣದಲ್ಲಿ ನಡೆದ ವಿಶ್ವವಿದ್ಯಾಲಯ ಮಟ್ಟದ ಕ್ರೀಡಾಕೂಟಕ್ಕೆ ತಡವಾಗಿ ಆಗಮಿಸಿದ್ದರು ಎಂದು ಅವರು ಆರೋಪಿಸಿದರು. ಅಲ್ಲದೆ, ತಾವೇ ಸ್ವಾಗತ ಭಾಷಣ ಮಾಡಿ, ತಾವೇ ವಂದನಾರ್ಪಣೆ ಮಾಡಿದ್ದರಿಂದ ವಿಶ್ವವಿದ್ಯಾಲಯ ಮಟ್ಟದ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸ್ವಪಕ್ಷದ ಜನಪ್ರತಿನಿಧಿಗಳಿಗೆ ಅವಮಾನವಾಗಿತ್ತು ಶಿಕ್ಷಕ ವರ್ಗಕ್ಕೆ ಹೇಗೆ ಗೌರವ ನೀಡಬೇಕು ಎಂಬ ಕುರಿತು ಇವರಿಂದ ನೈತಿಕ ಪಾಠ ಕಲಿಯುವ ಅಗತ್ಯ ನಮ್ಮ ಶಾಸಕರಿಗಿಲ್ಲ ಎಂದು ಅವರು ತಿರುಗೇಟು ನೀಡಿದರು.
ಮುಖಂಡ ಮಧುಸೂಧನ್ ಮಾತನಾಡಿ, ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದನ್ನೇ ಶಿಕ್ಷಕರಿಗೆ ಮಾಡಿದ ಅವಮಾನ ಎಂದು ಬಿಂಬಿಸುವುದು ಸರಿಯಲ್ಲ ಎಂದರು. ಬಿಜೆಪಿಗೆ ನಿಜವಾಗಿಯೂ ಶಿಕ್ಷಕರ ಬಗ್ಗೆ ಕಾಳಜಿ ಇದ್ದರೆ, ಶಿಕ್ಷಕರ ದಿನಾಚರಣೆಯನ್ನು ರಾಜಕೀಯ ವಿಷಯವನ್ನಾಗಿಸುವ ಬದಲು ಶಿಕ್ಷಕರ ನೈಜ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಯಾವುದೇ ಆಧಾರವಿಲ್ಲದೆ ಜನರನ್ನು ದಿಕ್ಕುತಪ್ಪಿಸುವ ವೈಯಕ್ತಿಕ ಟೀಕೆಗಳು ಮುಂದುವರಿದರೆ, ಬಿಜೆಪಿಯ ಹಿಂದಿನ ಆಡಳಿತಾವಧಿಯ ವೈಫಲ್ಯಗಳು ಹಾಗೂ ಹಗರಣಗಳ ಕುರಿತು ಜನರ ಮುಂದೆ ಮಾಹಿತಿ ಇಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಿರೋಧ ಪಕ್ಷದಲ್ಲಿರುವ ಬಿಜೆಪಿ ನಾಯಕರು ಕೇವಲ ಆರೋಪ ಮಾಡುವ ಬದಲು ತಮ್ಮ ಅಧಿಕಾರದ ಅವಧಿಯಲ್ಲಿನ ಕೆಲಸಗಳಿಗೆ ಮೊದಲು ಲೆಕ್ಕ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಗಣಪತಿ ಗವಟೂರು, ನಿರೂಪ್ ಕುಮಾರ್, ಕೆರೆಹಳ್ಳಿ ರವೀಂದ್ರ, ಪ್ರಕಾಶ್ ಪಾಲೇಕರ್, ನವೀನ್, ಬಿಎಸ್‌ಎನ್‌ಎಲ್ ಶ್ರೀಧರ್ ಹಾಗೂ ಜಾಕೀರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.