Headlines

ಮಲೆನಾಡಿನ ಮಳೆಯಿಂದ ಮೈದುಂಬಿದ ಜೋಗ ಜಲಪಾತ; ವಿಶ್ವವಿಖ್ಯಾತ ತಾಣದಲ್ಲಿ ಪ್ರವಾಸಿಗರ ದಂಡು

Screenshot 2026 07 05 17 24 48 054 photoeditor.layout.collagemaker edit

ಮಲೆನಾಡಿನ ಮಳೆಯಿಂದ ಮೈದುಂಬಿದ ಜೋಗ ಜಲಪಾತ; ವಿಶ್ವವಿಖ್ಯಾತ ತಾಣದಲ್ಲಿ ಪ್ರವಾಸಿಗರ ದಂಡು

Heavy rainfall in Shivamogga’s Malnad region has revived the majestic Jog Falls. Water is gushing through Raja, Rani, Roarer and Rocket streams, attracting large numbers of tourists.

ಶಿವಮೊಗ್ಗ, ಜುಲೈ 5: ಮಲೆನಾಡು ಭಾಗದಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ವಿಶ್ವವಿಖ್ಯಾತ ಜೋಗ ಜಲಪಾತ ತನ್ನ ನೈಜ ವೈಭವವನ್ನು ಮರಳಿ ಪಡೆದುಕೊಂಡಿದೆ. ಮಳೆ ತಡವಾಗಿ ಆರಂಭವಾದ ಹಿನ್ನೆಲೆಯಲ್ಲಿ ಈ ಬಾರಿ ಜಲಪಾತದ ಸೊಬಗು ಸಹ ಸ್ವಲ್ಪ ತಡವಾಗಿ ಅನಾವರಣಗೊಂಡಿದ್ದು, ಇದೀಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಜೋಗ ಜಲಪಾತದ ನಾಲ್ಕು ಪ್ರಮುಖ ಧಾರೆಗಳಾದ ರಾಜಾ, ರಾಣಿ, ರೋರರ್ ಹಾಗೂ ರಾಕೆಟ್ ಧಾರೆಗಳಲ್ಲಿ ನೀರಿನ ಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಎತ್ತರದ ಬಂಡೆಗಳ ಮೇಲಿಂದ ಹಾಲಿನ ನೊರೆಯಂತೆ ಧುಮ್ಮಿಕ್ಕಿ ಹರಿಯುತ್ತಿರುವ ದೃಶ್ಯ ಮನಮೋಹಕವಾಗಿದೆ.

ಜಲಪಾತದ ಭೋರ್ಗರೆಯುವ ಶಬ್ದ, ಸುತ್ತಮುತ್ತಲಿನ ಹಸಿರು ಪರಿಸರ ಹಾಗೂ ದಟ್ಟ ಮಂಜಿನ ನಡುವೆ ಮೂಡಿರುವ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ವಾರಾಂತ್ಯದ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಹೊರ ರಾಜ್ಯಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜೋಗ ಜಲಪಾತಕ್ಕೆ ಆಗಮಿಸಿ ಪ್ರಕೃತಿಯ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸೆಲ್ಫಿ, ಛಾಯಾಗ್ರಹಣ ಹಾಗೂ ವಿಡಿಯೊ ಚಿತ್ರೀಕರಣದಲ್ಲಿ ಪ್ರವಾಸಿಗರು ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ.

ಹವಾಮಾನ ಇಲಾಖೆ ಮುಂದಿನ ದಿನಗಳಲ್ಲೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯನ್ನು ಸೂಚಿಸಿರುವುದರಿಂದ ಜೋಗ ಜಲಪಾತದ ನೀರಿನ ಹರಿವು ಇನ್ನಷ್ಟು ಹೆಚ್ಚುವ ನಿರೀಕ್ಷೆ ವ್ಯಕ್ತವಾಗಿದೆ. ಮಳೆಯ ಪ್ರಮಾಣ ಹೆಚ್ಚಾದರೆ ಜಲಪಾತ ತನ್ನ ಪೂರ್ಣ ವೈಭವವನ್ನು ಪ್ರದರ್ಶಿಸಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.