ಒಂದೇ ದಿನ 70 ವಾಹನಗಳು ಪೊಲೀಸರ ವಶಕ್ಕೆ! ಕಾರಣ ಕೇಳಿದ್ರೆ ಅಚ್ಚರಿ! ; ವಿಶೇಷ ಕಾರ್ಯಾಚರಣೆಯಲ್ಲಿ ಪೊಲೀಸರ ಬಿಗಿ ಕ್ರಮ
Shivamogga Traffic Police seized 70 vehicles without number plates during a special enforcement drive and registered cases under CMV Rule 50(3) and IMV Act Section 177.
ಶಿವಮೊಗ್ಗ: ಇ-ಚಲನ್ನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಾಹನಗಳ ನೋಂದಣಿ ಸಂಖ್ಯೆ (ನಂಬರ್ ಪ್ಲೇಟ್) ಫಲಕಗಳನ್ನು ತೆಗೆದು ಸಂಚರಿಸುತ್ತಿದ್ದ ವಾಹನ ಸವಾರರ ವಿರುದ್ಧ ಶಿವಮೊಗ್ಗ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುತ್ತಿದ್ದ ಸುಮಾರು 70 ವಾಹನಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ಶಿವಮೊಗ್ಗ ನಗರದ ವಿವಿಧ ಭಾಗಗಳಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ, ನಂಬರ್ ಪ್ಲೇಟ್ ಇಲ್ಲದೆ ರಸ್ತೆಗಿಳಿದಿದ್ದ ದ್ವಿಚಕ್ರ ಹಾಗೂ ಇತರೆ ವಾಹನಗಳನ್ನು ತಡೆದು ಪರಿಶೀಲನೆ ನಡೆಸಲಾಯಿತು. ಈ ವೇಳೆ ಸುಮಾರು 70 ವಾಹನಗಳು ನಿಯಮ ಉಲ್ಲಂಘಿಸಿರುವುದು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ವಾಹನಗಳ ವಿರುದ್ಧ ಕೇಂದ್ರ ಮೋಟಾರು ವಾಹನ ನಿಯಮಗಳು, 1988ರ ನಿಯಮ 50(3) (CMV Rule 50(3)) ಹಾಗೂ ಭಾರತೀಯ ಮೋಟಾರು ವಾಹನ ಕಾಯ್ದೆಯ ಕಲಂ 177 (IMV Act Section 177) ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಸಂಚಾರಿ ಪೊಲೀಸ್ ಠಾಣೆಗೆ ಖುದ್ದಾಗಿ ಭೇಟಿ ನೀಡಿದ ಎಸ್ಪಿ ನಿಖಿಲ್ ಬಿ. ಅವರು ಬೈಕ್ ಮಾಲೀಕರಿಗೆ ಕಠಿಣ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಾಹನ ಸವಾರರು ಕಡ್ಡಾಯವಾಗಿ ಮುಂಭಾಗ ಹಾಗೂ ಹಿಂಭಾಗ ಎರಡೂ ಕಡೆ ನಂಬರ್ ಪ್ಲೇಟ್ ಅಳವಡಿಸಿಕೊಂಡೇ ಚಲಿಸಬೇಕು. ಇನ್ನೊಮ್ಮೆ ಇಂತಹ ನಿಯಮ ಉಲ್ಲಂಘನೆ ಪುನರಾವರ್ತನೆಯಾದರೆ, ಅಂತಹ ಸವಾರರ ಮೇಲೆ ನೇರವಾಗಿ ಎಫ್ಐಆರ್ ದಾಖಲಿಸಿ ಎಂದು ಸಂಚಾರಿ ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.