w
Headlines
Home » ಅರಣ್ಯ ಇಲಾಖೆ ವಿರುದ್ಧ ಮಲೆನಾಡಿನಲ್ಲಿ ರೈತರ ಆಕ್ರೋಶ: ಟ್ರೆಂಚ್ ಮುಚ್ಚಿ ಬೃಹತ್ ಪ್ರತಿಭಟನೆ

ಅರಣ್ಯ ಇಲಾಖೆ ವಿರುದ್ಧ ಮಲೆನಾಡಿನಲ್ಲಿ ರೈತರ ಆಕ್ರೋಶ: ಟ್ರೆಂಚ್ ಮುಚ್ಚಿ ಬೃಹತ್ ಪ್ರತಿಭಟನೆ

GridArt 20260502

ಅರಣ್ಯ ಇಲಾಖೆ ವಿರುದ್ಧ ಮಲೆನಾಡಿನಲ್ಲಿ ರೈತರ ಆಕ್ರೋಶ: ಟ್ರೆಂಚ್ ಮುಚ್ಚಿ ಬೃಹತ್ ಪ್ರತಿಭಟನೆ

Farmers in Thirthahalli staged a massive protest against the Forest Department, filling trenches dug on former MLA Konanduru Lingappa’s land and demanding a joint survey.

ತೀರ್ಥಹಳ್ಳಿ: ಅರಣ್ಯ ಇಲಾಖೆಯ ಕ್ರಮಗಳನ್ನು ಖಂಡಿಸಿ ತೀರ್ಥಹಳ್ಳಿ ತಾಲೂಕಿನ ಮೇಲಿನ ಕಡಗೋಡು ಗ್ರಾಮದಲ್ಲಿ ‘ಮಲೆನಾಡು ಸಂಘರ್ಷ ಕ್ರಿಯಾ ಸಮಿತಿ’ ನೇತೃತ್ವದಲ್ಲಿ ಶನಿವಾರ ಬೃಹತ್ ಪ್ರತಿಭಟನೆ ನಡೆಯಿತು. ಹಿರಿಯ ಸಮಾಜವಾದಿ ಹಾಗೂ 93 ವರ್ಷದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಜಮೀನಿನಲ್ಲಿ ಅರಣ್ಯ ಇಲಾಖೆ ತೋಡಿದ್ದ ಟ್ರೆಂಚ್‌ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಸ್ಥಳದಲ್ಲೇ ಟ್ರೆಂಚ್‌ಗೆ ಮಣ್ಣು ಹಾಕಿ ಮುಚ್ಚುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು. ಈ ಹೋರಾಟವು ಕೇವಲ ಒಂದು ಕುಟುಂಬದ ಜಮೀನಿನ ವಿಚಾರವಲ್ಲದೆ, ಮಲೆನಾಡು ಭಾಗದ ಸಾವಿರಾರು ರೈತರಿಗೆ ಸಂಬಂಧಿಸಿದ ಸಮಸ್ಯೆಯಾಗಿ ರೂಪುಗೊಂಡಿದೆ.

ಘಟನೆಯ ಹಿನ್ನೆಲೆ

ಮೇಲಿನ ಕಡಗೋಡು ಗ್ರಾಮದ ಸರ್ವೆ ನಂ. 51 ಮತ್ತು 48ರಲ್ಲಿರುವ ಜಮೀನು ಸರ್ಕಾರದಿಂದ ಕಾನೂನುಬದ್ಧವಾಗಿ ಮಂಜೂರಾಗಿದ್ದು, ಕೋಣಂದೂರು ಲಿಂಗಪ್ಪ ಹಾಗೂ ಅವರ ಕುಟುಂಬದ ಹೆಸರಿನಲ್ಲಿ ಖಾತೆ ಮತ್ತು ಪಹಾಣಿ ದಾಖಲೆಗಳಿವೆ. ಆದರೂ, ಈ ಜಾಗವನ್ನು ಅರಣ್ಯ ಭೂಮಿಯೆಂದು ವಾದಿಸಿದ ಅರಣ್ಯ ಇಲಾಖೆ ಜಮೀನಿನ ಸುತ್ತ ಟ್ರೆಂಚ್ ತೋಡಿತ್ತು. ಈ ಕ್ರಮಕ್ಕೆ ವಿರೋಧವಾಗಿ ಸಂಘಟಿತ ಹೋರಾಟಕ್ಕೆ ಕರೆ ನೀಡಲಾಗಿತ್ತು.

ಪ್ರತಿಭಟನೆಯ ವೇಳೆ ಭಾರಿ ಪ್ರಮಾಣದಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಲಿಂಗಪ್ಪ ಅವರ ಪತ್ನಿ ಅರಣ್ಯ ಅಧಿಕಾರಿಗಳ ವಿರುದ್ಧ ಪೊಲೀಸ್ ಇನ್ಸ್‌ಪೆಕ್ಟರ್‌ಗೆ ದೂರು ಸಲ್ಲಿಸಿದರು.ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಒಂದು ವಾರದೊಳಗೆ ಜಂಟಿ ಸರ್ವೆ ನಡೆಸುವ ಭರವಸೆ ನೀಡಿದ ಅವರು, ಅಷ್ಟರವರೆಗೆ ಆ ಜಾಗಕ್ಕೆ ಇಲಾಖೆಯವರು ಬರುವುದಿಲ್ಲ ಎಂದು ಒಪ್ಪಿಕೊಂಡರು.
ಇದಾದ ನಂತರ, ಪ್ರತಿಭಟನಾಕಾರರು ಸಾಂಕೇತಿಕವಾಗಿ ಟ್ರೆಂಚ್ ಅನ್ನು ಮಣ್ಣು ಹಾಕಿ ಮುಚ್ಚಿದರು.

ಈ ಹೋರಾಟದ ಮೂಲಕ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿರುವ ರೈತರಿಗೆ ಹೊಸ ಆತ್ಮಸ್ಥೈರ್ಯ ಲಭಿಸಿದೆ. ಅರಣ್ಯ ಇಲಾಖೆ ರೈತರ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸ್ವಾಮಿರಾವ್ ಸೇರಿದಂತೆ ಹೊಸಕೊಪ್ಪ ಸುಂದರೇಶ್, ನೆಂಪೆ ದೇವರಾಜ್, ಕೋಣಂದೂರು ಅಶೋಕ್, ಬಿ.ಆರ್. ಜಯಂತ್, ತೀ.ನಾ. ಶ್ರೀನಿವಾಸ್, ಕೆ.ಪಿ. ಶ್ರೀಪಾಲ್, ಕೆ.ಎಲ್. ಅಶೋಕ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಬಿ. ಚಂದ್ರೇಗೌಡ ಸೇರಿದಂತೆ ನೂರಾರು ರೈತರು ಹಾಗೂ ಮುಖಂಡರು ಭಾಗವಹಿಸಿದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.