w
Headlines
Home » ಹತ್ತು ದಿನದ ಹಿಂದಷ್ಟೇ ಮದುವೆ, ಈಗ ಜೈಲು : ಪ್ರೇಮಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳನ ಬಂಧನ

ಹತ್ತು ದಿನದ ಹಿಂದಷ್ಟೇ ಮದುವೆ, ಈಗ ಜೈಲು : ಪ್ರೇಮಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳನ ಬಂಧನ

GridArt 20260525

ಹತ್ತು ದಿನದ ಹಿಂದಷ್ಟೇ ಮದುವೆ, ಈಗ ಜೈಲು : ಪ್ರೇಮಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಹೈಟೆಕ್ ಕಳ್ಳನ ಬಂಧನ

A newly married man from Shivamogga was arrested for chain snatching just 10 days after his wedding. Police tracked him down using the car number noted by the victims.

ಶಿವಮೊಗ್ಗ: ಮದುವೆಯಾಗಿ ಹತ್ತು ದಿನಗಳೂ ಕಳೆಯುವ ಮುನ್ನವೇ ಐಷಾರಾಮಿ ಜೀವನದ ಆಸೆಗೆ ಬಿದ್ದು ಸರಗಳ್ಳತನಕ್ಕಿಳಿದಿದ್ದ ನವವಿವಾಹಿತನನ್ನು ಶಿವಮೊಗ್ಗ ಗ್ರಾಮಾಂತರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ.

ಮೇ 23ರಂದು ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದ ಬಳಿ ಪ್ರೇಮಿಗಳಿಬ್ಬರು ಕಾರು ನಿಲ್ಲಿಸಿ ಮಾತನಾಡುತ್ತಿದ್ದ ವೇಳೆ, ತನ್ನ ಕಾರಿನಲ್ಲಿ ಅಲ್ಲಿಗೆ ಬಂದ ಮಂಜುನಾಥ್ ಯುವತಿಯ ಕೊರಳಲ್ಲಿದ್ದ ಸುಮಾರು 10 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದ. ಏಕಾಏಕಿ ನಡೆದ ಈ ಕೃತ್ಯದಿಂದ ಬೆಚ್ಚಿಬಿದ್ದ ಪ್ರೇಮಿಗಳು, ಆರೋಪಿಯ ಕಾರಿನ ಸಂಖ್ಯೆಯನ್ನು ಗಮನಿಸಿ ತಕ್ಷಣವೇ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಾರಿನ ಸಂಖ್ಯೆಯನ್ನು ಆಧರಿಸಿ ತನಿಖೆ ಆರಂಭಿಸಿದ್ದರು. ತಾಂತ್ರಿಕ ಮಾಹಿತಿ ಹಾಗೂ ವಾಹನದ ಜಾಡು ಹಿಡಿದ ಪೊಲೀಸರು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳವು ಮಾಡಿದ್ದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ಬಂಧಿಸಲು ತೆರಳಿದ ಪೊಲೀಸರಿಗೆ ಮತ್ತೊಂದು ಅಚ್ಚರಿ ಕಾದಿತ್ತು. ಕಳ್ಳತನಕ್ಕೆ ಬಳಸಿದ್ದ ಕಾರಿನ ಮೇಲೆ ಮದುವೆಯ ಅಲಂಕಾರ ಇನ್ನೂ ಹಾಗೆಯೇ ಇರುವುದು ಕಂಡುಬಂದಿದೆ. ಮದುವೆಯ ಸಂಭ್ರಮ ಮುಗಿಯುವ ಮುನ್ನವೇ ಆರೋಪಿಯು ಅಪರಾಧ ಕೃತ್ಯದಲ್ಲಿ ತೊಡಗಿರುವುದು ಪೊಲೀಸರನ್ನೇ ಬೆರಗುಗೊಳಿಸಿದೆ.

ಪೊಲೀಸ್ ವಿಚಾರಣೆಯಲ್ಲಿ ಆರೋಪಿಯ ಹಳೆಯ ಕೃತ್ಯಗಳೂ ಬೆಳಕಿಗೆ ಬಂದಿವೆ. ಐಷಾರಾಮಿ ಜೀವನ ನಡೆಸುವ ಆಸೆಯಿಂದಾಗಿ ಈತ ಈ ಹಿಂದೆಯೂ ಏಕಾಂತದಲ್ಲಿದ್ದ ಪ್ರೇಮಿಗಳನ್ನು ಗುರಿಯಾಗಿಸಿಕೊಂಡು ಚಿನ್ನಾಭರಣ ದೋಚುತ್ತಿದ್ದ ಎನ್ನಲಾಗಿದೆ. ಆದರೆ ಹಿಂದಿನ ಪ್ರಕರಣಗಳಲ್ಲಿ ದೂರು ದಾಖಲಾಗದ ಕಾರಣ ಆತ ತಪ್ಪಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪತ್ನಿಯೊಂದಿಗೆ ಹೊಸ ಜೀವನ ಆರಂಭಿಸಬೇಕಿದ್ದ ನವವಿವಾಹಿತ, ತನ್ನದೇ ದುರ್ಬುದ್ಧಿಯಿಂದಾಗಿ ಇದೀಗ ಜೈಲು ಸೇರಿರುವುದು ಗಮನಾರ್ಹವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.