w
Headlines
Home » ತಂದೆಯ ಅಂತ್ಯಕ್ರಿಯೆಯ ನಡುವೆಯೇ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

ತಂದೆಯ ಅಂತ್ಯಕ್ರಿಯೆಯ ನಡುವೆಯೇ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿ

GridArt 20260326

A Shivamogga student writes her Class 10 exam despite her father’s death, showing remarkable courage and determination amid personal tragedy.

ಶಿವಮೊಗ್ಗ: ತಂದೆಯ ಸಾವಿನ ದುಃಖದ ನಡುವೆಯೇ 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯೊಬ್ಬಳ ಘಟನೆ ಶಿವಮೊಗ್ಗ ತಾಲ್ಲೂಕಿನ ಹಸೋಡಿ ಫಾರಂ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ವಿದ್ಯಾರ್ಥಿನಿ ಶರಣ್ಯ, ಭಾವನಾತ್ಮಕ ಸಂಕಷ್ಟದ ನಡುವೆಯೂ ಆತ್ಮಸ್ಥೈರ್ಯ ಕಳೆದುಕೊಳ್ಳದೇ ಪರೀಕ್ಷೆ ಬರೆದು ಗಮನ ಸೆಳೆದಿದ್ದಾಳೆ. ಮಂಗಳವಾರ ರಾತ್ರಿ ಆಕೆಯ ತಂದೆ ತಂಗರಾಜ್ ಅನಾರೋಗ್ಯದ ಹಿನ್ನೆಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಕುಟುಂಬವನ್ನು ದುಃಖದ ಸಾಗರದಲ್ಲಿ ಮುಳುಗಿಸಿದೆ.

ಇದೇ ವೇಳೆ ಬುಧವಾರ ಶರಣ್ಯಗೆ 10ನೇ ತರಗತಿಯ ಇಂಗ್ಲಿಷ್ ಪರೀಕ್ಷೆ ನಿಗದಿಯಾಗಿತ್ತು. ಒಂದೆಡೆ ತಂದೆಯ ಮರಣದ ನೋವು, ಮತ್ತೊಂದೆಡೆ ಭವಿಷ್ಯ ನಿರ್ಧರಿಸುವ ಪ್ರಮುಖ ಪರೀಕ್ಷೆ—ಈ ಎರಡು ಸಂದರ್ಭಗಳ ನಡುವೆ ಆಕೆ ಗೊಂದಲಕ್ಕೀಡಾದಳು.

ಕುಟುಂಬದವರು, ಶಿಕ್ಷಕರು ಮತ್ತು ಗ್ರಾಮಸ್ಥರು ಧೈರ್ಯ ತುಂಬಿದ ಹಿನ್ನೆಲೆಯಲ್ಲಿ ಶರಣ್ಯ ಪರೀಕ್ಷಾ ಕೇಂದ್ರಕ್ಕೆ ತೆರಳಿ ಪರೀಕ್ಷೆ ಬರೆದಳು. ಬಳಿಕ ಮನೆಗೆ ಮರಳಿ ತಂದೆಯ ಅಂತಿಮ ದರ್ಶನ ಪಡೆದಳು.

ತಂದೆ ತಂಗರಾಜ್ ಹಾಗೂ ತಾಯಿ ಮೀನಾ ಕೂಲಿ ಕೆಲಸ ಮಾಡಿಕೊಂಡು ಕುಟುಂಬವನ್ನು ನಿರ್ವಹಿಸುತ್ತಿದ್ದರು. ತಮ್ಮ ಇಬ್ಬರು ಹೆಣ್ಣು ಮಕ್ಕಳು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧನೆ ಮಾಡಬೇಕು ಎಂಬುದು ತಂದೆಯ ಕನಸಾಗಿತ್ತು.

ಈ ಘಟನೆ ಸಂಕಷ್ಟದ ಸಂದರ್ಭದಲ್ಲೂ ಧೈರ್ಯ ಮತ್ತು ಮನೋಬಲದಿಂದ ಮುಂದೆ ಸಾಗಿದ ವಿದ್ಯಾರ್ಥಿನಿಯ ದಿಟ್ಟ ನಿರ್ಧಾರಕ್ಕೆ ಉದಾಹರಣೆಯಾಗಿದೆ. ಈಗ ತಾಯಿ ಮತ್ತು ತಂಗಿಯ ಭವಿಷ್ಯದ ಹೊಣೆ ಹೊತ್ತಿರುವ ಶರಣ್ಯ ಮುಂದಿನ ದಿನಗಳಲ್ಲಿ ಎಲ್ಲಾ ಸವಾಲುಗಳನ್ನು ಜಯಿಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.