Holi festival was celebrated with vibrant enthusiasm across Shivamogga city, featuring DJ dance, rain dance, Kama Dahana rituals, tight police security, and large public participation at Gopi Circle and other major localities.
ಶಿವಮೊಗ್ಗ: ನಗರದಾದ್ಯಂತ ಬುಧವಾರ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಯುವಕ-ಯುವತಿಯರು, ಮಕ್ಕಳು, ಮಹಿಳೆಯರು ಬಣ್ಣಗಳನ್ನು ಪರಸ್ಪರ ಎರಚಿಕೊಂಡು ರಂಗಿನ ಹಬ್ಬದ ಸಂಭ್ರಮದಲ್ಲಿ ತೇಲಿದರು. ಭ್ರಾತೃತ್ವ ಮತ್ತು ಭಾವೈಕ್ಯತೆಯ ಸಂಕೇತವಾದ ಹೋಳಿ ಹಬ್ಬವು ಈ ಬಾರಿ ಶಿವಮೊಗ್ಗ ನಗರವನ್ನು ಸಂಪೂರ್ಣವಾಗಿ ವರ್ಣಮಯಗೊಳಿಸಿತು.
ಗಾಂಧಿ ಬಜಾರ್, ಸಿಗೇಹಟ್ಟಿ ಪ್ರದೇಶಗಳಲ್ಲಿ ಕಾಮನ ಪ್ರತಿಕೃತಿ ದಹನ ಮಾಡುವ ಮೂಲಕ ಹಬ್ಬದ ಐತಿಹ್ಯವನ್ನು ಪಾಲಿಸಲಾಯಿತು. ದುರ್ಗಿಗುಡಿ, ವಿನೋಬನಗರ, ಕೋಟೆ ರಸ್ತೆ, ಶರಾವತಿ ನಗರ, ಹೊಸಮನೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಜನರು ಗುಂಪು ಗುಂಪಾಗಿ ಸೇರಿ ಬಣ್ಣದ ಓಕುಳಿ ಆಡಿದರು. ಗಾಂಧಿ ಬಜಾರ್, ರವಿವರ್ಮ ಬೀದಿ, ಕುಂಬಾರ ಬೀದಿ ಸೇರಿದಂತೆ ಅನೇಕ ಕಡೆಗಳಲ್ಲಿ ಮನ್ಮಥನ ಪ್ರತಿಷ್ಠಾಪನೆ ಮಾಡಿ ನಂತರ ಕಾಮ ದಹನ ನೆರವೇರಿಸಲಾಯಿತು.
ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಯುವಕರು ಬೈಕ್‌ಗಳಲ್ಲಿ ಸಂಚರಿಸುತ್ತ ಘೋಷಣೆ ಕೂಗಿ ಸಂಭ್ರಮಿಸಿದರು. ಮಡಕೆ ಒಡೆಯುವ ಕಾರ್ಯಕ್ರಮಗಳು, ಡಿಜೆ ಸಂಗೀತಕ್ಕೆ ತಕ್ಕಂತೆ ನೃತ್ಯ ಹಾಗೂ ಪರಸ್ಪರ ನೀರೆರೆಚಿಕೊಳ್ಳುವ ದೃಶ್ಯಗಳು ಸಾಮಾನ್ಯವಾಗಿದ್ದವು. ಪುಟ್ಟ ಮಕ್ಕಳು ಬಣ್ಣದ ನೀರಿನಲ್ಲಿ ಮಿಂದೆದ್ದು ಖುಷಿಪಟ್ಟರು.
ನಗರದ ಗೋಪಿ ವೃತ್ತದಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ವತಿಯಿಂದ ವಿಶೇಷ ಹೋಳಿ ಆಚರಣೆ ಆಯೋಜಿಸಲಾಗಿತ್ತು. ಡಿಜೆ ಸೌಂಡ್, ರೈನ್ ಡಾನ್ಸ್ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಾವಿರಾರು ಯುವಕರು ಪಾಲ್ಗೊಂಡರು. ರೈನ್ ಡಾನ್ಸ್‌ಗಾಗಿ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗ ಮಾಡಿ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಪೊಲೀಸರು ಹಾಗೂ ಸಂಘಟನೆಯ ಕಾರ್ಯಕರ್ತರು ಭದ್ರತಾ ವ್ಯವಸ್ಥೆ ನೋಡಿಕೊಂಡರು.
ಹೋಳಿ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಸುತ್ತಮುತ್ತಲಿನ ಕಟ್ಟಡಗಳ ಬಾಲ್ಕನಿಗಳಲ್ಲೂ ಜನರು ನಿಂತು ವೀಕ್ಷಿಸಿದರು. ಸೆಲ್ಫಿ, ಫೋಟೋ ಕ್ಲಿಕ್ಕಿಸಿಕೊಂಡು ಹಬ್ಬದ ಕ್ಷಣಗಳನ್ನು ಸ್ಮರಣೀಯ ಮಾಡಿಕೊಂಡರು.
ಗೋಪಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಭಾಗವಹಿಸಿ ಸಾರ್ವಜನಿಕರೊಂದಿಗೆ ಬಣ್ಣದ ಓಕುಳಿಯಲ್ಲಿ ಪಾಲ್ಗೊಂಡರು. ಅವರ ಹಾಜರಾತಿ ಹಬ್ಬಕ್ಕೆ ಇನ್ನಷ್ಟು ಮೆರಗು ನೀಡಿತು.
ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗೋಪಿ ವೃತ್ತದಲ್ಲಿ ಕಾರ್ಯಕ್ರಮ ಇರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗಗಳನ್ನು ಕಲ್ಪಿಸಲಾಗಿತ್ತು. ಬಾಲರಾಜ್ ಅರಸ್ ರಸ್ತೆ, ದುರ್ಗಿಗುಡಿ ರಸ್ತೆ ಹಾಗೂ ಬಿ.ಹೆಚ್. ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಿ, ನೆಹರು ರಸ್ತೆ ಮೂಲಕ ವಾಹನ ಸಂಚಾರವನ್ನು ಮಹಾವೀರ ಸರ್ಕಲ್ ಕಡೆಗೆ ಮರುನಿರ್ದೇಶಿಸಲಾಯಿತು.
ಕೆಲವೆಡೆ ಕರ್ಕಶ ಶಬ್ದ ಮಾಡುವ ಬೈಕ್‌ಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡಿದರೂ, ಒಟ್ಟಾರೆ ಈ ಬಾರಿಯ ಹೋಳಿ ಹಬ್ಬ ಶಾಂತಿಯುತವಾಗಿ ಹಾಗೂ ಅತ್ಯಂತ ಸಂಭ್ರಮದಿಂದ ನೆರವೇರಿತು.