HOSANAGARA| ಮಾಜಿ ಶಾಸಕ ಬಿ.ಸ್ವಾಮಿರಾವ್ ಆಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯ
HOSANAGARA| Former MLA B. Swami Rao’s hunger strike ends
ಹೊಸನಗರ | ಪಟ್ಟಣದ ತಾಲೂಕು ಆರ್ಯ ಈಡಿಗ ವಿದ್ಯಾವರ್ಧಕ ಸಂಘದಲ್ಲಿ ಭಾರಿ ಅವ್ಯವಹಾರ ಹಾಗೂ ನಿಯಮಬಾಹಿರ ಆಡಳಿತ ನಡೆಯುತ್ತಿದೆ ಎಂದು ಆರೋಪಿಸಿ, ಮಾಜಿ ಶಾಸಕ ಬಿ.ಸ್ವಾಮಿರಾವ್ ಅವರು ಪಟ್ಟಣದ ಬಸ್ ನಿಲ್ದಾಣದ ಸಮೀಪದ ಆರ್ಯ ಈಡಿಗ ಸಂಘದ ಎದುರು ಆರಂಭಿಸಿದ್ದ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು, ಹಲವು ಮುಖಂಡರು ಹಾಗೂ ಸಮಾಜದ ಗಣ್ಯರ ಒತ್ತಾಯದ ಮೇರೆಗೆ ಕೊನೆಗೂ ಅಂತ್ಯಗೊಳಿಸಿದರು.
ಗುರುವಾರ ನಿಟ್ಟೂರು ಶ್ರೀಗಳು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಸೇರಿದಂತೆ ಅನೇಕ ಸಮಾಜದ ನಾಯಕರು ಸ್ಥಳಕ್ಕೆ ಭೇಟಿ ನೀಡಿ ಸ್ವಾಮಿರಾವ್ ಅವರನ್ನು ಮನವೊಲಿಸಿದರು. ಸಂಘದಲ್ಲಿನ ಭ್ರಷ್ಟಾಚಾರದ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆ ನೀಡಿದ ಹಿನ್ನಲೆಯಲ್ಲಿ, ಸ್ವಾಮಿರಾವ್ ಅವರು ಎಳನೀರು ಕುಡಿಯುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು.
ತಾವು ಶಾಸಕರಾಗಿದ್ದ ಅವಧಿಯಲ್ಲಿ ಸಂಘಕ್ಕೆ ಸೇರಿದ ಜಾಗವನ್ನು ಕಾನೂನುಬದ್ಧವಾಗಿ ಪಡೆದು, ಅಲ್ಲಿ ಮಳಿಗೆಗಳನ್ನು ನಿರ್ಮಿಸಿ ಸಂಘಕ್ಕೆ ನಿರಂತರ ಆದಾಯ ಬರುವಂತೆ ವ್ಯವಸ್ಥೆ ಮಾಡಿದ್ದೇನೆ ಎಂದು ಸ್ವಾಮಿರಾವ್ ತಿಳಿಸಿದರು. ಆದರೆ ತಮ್ಮ ನಂತರ ಅಧಿಕಾರ ಹಿಡಿದ ಈಡಿಗ ಮುಖಂಡರು ಕಳೆದ 10–15 ವರ್ಷಗಳಿಂದ ಸಂಘದ ಏಳಿಗೆಗೆ ಯಾವುದೇ ಕ್ರಮ ಕೈಗೊಳ್ಳದೇ, ಸಾಮಾನ್ಯ ಸಭೆ (ಜನರಲ್ ಬಾಡಿ) ಕೂಡ ನಡೆಸದೇ ಅವ್ಯವಹಾರ ನಡೆಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಈ ಹಿಂದೆ ಈಡಿಗ ಸಂಘದ ಕಟ್ಟಡ ಉದ್ಘಾಟನೆ ದಿನವೇ ಪ್ರತಿಭಟನೆ ನಡೆಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದ ಸ್ವಾಮಿರಾವ್, ಸ್ವಜಾತಿ ಮುಖಂಡರ ಮನವಿಯನ್ನು ಗೌರವಿಸಿ ಆ ಪ್ರತಿಭಟನೆಯನ್ನು ಮುಂದೂಡಿದ್ದರು. ಆದರೆ ಆಡಳಿತ ಮಂಡಳಿಯ ಧೋರಣೆ ಬದಲಾಗದ ಕಾರಣ, ಇಂದು ಹಠಾತ್ತನೆ ಸಂಘದ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದ್ದರು. ತಮ್ಮ ಬೇಡಿಕೆಗಳು ಈಡೇರದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರು.
ಪ್ರಸ್ತುತ ಆಡಳಿತ ಮಂಡಳಿ ಕಾನೂನುಬಾಹಿರವಾಗಿ ಅಧಿಕಾರ ನಡೆಸುತ್ತಿದ್ದು, ತಕ್ಷಣವೇ ಎಲ್ಲಾ ಸದಸ್ಯರು ರಾಜೀನಾಮೆ ನೀಡಬೇಕು ಹಾಗೂ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆಯಾಗಬೇಕು ಎಂಬುದು ತಮ್ಮ ಪ್ರಮುಖ ಬೇಡಿಕೆ ಎಂದು ಸ್ವಾಮಿರಾವ್ ಆಗ್ರಹಿಸಿದ್ದರು.
ಮಾಜಿ ಶಾಸಕ ಜಿ.ಡಿ. ನಾರಾಯಣಪ್ಪ, ಮಾಜಿ ಸಚಿವ ಹರತಾಳು ಹಾಲಪ್ಪ, ಡಾ. ರಾಜನಂದಿನಿ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಮುಖಂಡರಾದ ಕಲ್ಲೂರು ಮೇಘರಾಜ್, ಆರ್.ಎ. ಚಾಬುಸಾಬ್ , ಎನ್. ಸತೀಶ್,ಸೇರಿದಂತೆ ಹಲವರು ಸ್ಥಳಕ್ಕೆ ಭೇಟಿ ನೀಡಿ ಸ್ವಾಮಿರಾವ್ ಅವರೊಂದಿಗೆ ನಿರಂತರ ಮಾತುಕತೆ ನಡೆಸಿದರು.