POSTMANNEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ | ಬಿಜೆಪಿ ಕಾರ್ಯಕರ್ತರನ್ನು ಹೆದರಿಸಲು ಸಾಧ್ಯವಿಲ್ಲ  – ಸಂಸದ ಬಿ.ವೈ. ರಾಘವೇಂದ್ರ

BJP leaders staged a massive protest in Hosanagara alleging misuse of the police department under pressure from local Congress leaders. MP B.Y. Raghavendra warned that harassment of party workers will not be tolerated.

ಹೊಸನಗರ: ಸ್ಥಳೀಯ ಕಾಂಗ್ರೆಸ್ ಶಾಸಕರ ಸೂಚನೆಯಂತೆ ಪೊಲೀಸ್ ಇಲಾಖೆ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ತೊಂದರೆ ನೀಡುತ್ತಿದೆ. ಇಂತಹ ರಾಜಕೀಯ ಪ್ರೇರಿತ ಕ್ರಮಗಳನ್ನು ಬಿಜೆಪಿ ಪಕ್ಷ ಯಾವತ್ತೂ ಸಹಿಸುವುದಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ ಎಚ್ಚರಿಸಿದರು.

ಪಟ್ಟಣದ ಪೊಲೀಸ್ ಇಲಾಖೆ ಎದುರು ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಆಯೋಜಿಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಶಾಸಕರ ಮಾತಿನಂತೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಿಜೆಪಿ ಕಾರ್ಯಕರ್ತರನ್ನು ಹೆದರಿಸಲು ಯತ್ನಿಸಲಾಗುತ್ತಿದೆ. ಪ್ರಾಮಾಣಿಕವಾಗಿ ದುಡಿಯುತ್ತಿರುವ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಆದರೆ ಬಿಜೆಪಿ ಇಂತಹ ಒತ್ತಡಗಳಿಗೆ ಮಣಿಯುವ ಪಕ್ಷವಲ್ಲ ಎಂದು ಹೇಳಿದರು.

ಹೊಸನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆದ ಬಹುತೇಕ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಕಾರ್ಯಕರ್ತರ ಶ್ರಮವೇ ಕಾರಣ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಹಾಗೂ ಶಾಸಕರಾದ ಅರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪರ ಕಾಲದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿದ್ದವು. ಕೆಲವರು ಪಕ್ಷ ತೊರೆದರೂ ಸಹ, ಅಭಿವೃದ್ಧಿಗೆ ಯಾವುದೇ ಅಡಚಣೆ ಆಗದಂತೆ ನೋಡಿಕೊಂಡಿದ್ದು ಬಿಜೆಪಿ ಕಾರ್ಯಕರ್ತರೇ ಎಂದು ರಾಘವೇಂದ್ರ ಹೇಳಿದರು.

ಬಿಜೆಪಿ ಅಧಿಕಾರದಲ್ಲಿದ್ದ ಸಮಯದಲ್ಲಿ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಹಾಗೂ ಶಾಸಕರಾಗಿದ್ದ ಹರತಾಳು ಹಾಲಪ್ಪರು ಎಂದಿಗೂ ಪೊಲೀಸ್ ಇಲಾಖೆ ಅಥವಾ ಇತರ ಸರ್ಕಾರಿ ಸಂಸ್ಥೆಗಳ ದುರುಪಯೋಗಪಡಿಸಿಕೊಂಡಿಲ್ಲ. ಆದರೆ ಇಂದಿನ ಕಾಂಗ್ರೆಸ್ ಶಾಸಕರು ಅದೇ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪೂರ್ವನಿಯೋಜಿತ ಪ್ರಕರಣಗಳ ಹಿಂದೆ ರಾಜಕೀಯ ಒತ್ತಡ: ಹರತಾಳು ಹಾಲಪ್ಪ

ಪ್ರತಿಭಟನೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ, ಇತ್ತೀಚೆಗೆ ಬಿಜೆಪಿ ಕಾರ್ಯಕರ್ತರ ಮೇಲೆ ದಾಖಲಾಗಿರುವ ಪ್ರಕರಣಗಳು ಪೂರ್ವನಿಯೋಜಿತವಾಗಿದ್ದು, ಇದರಲ್ಲಿ ಸ್ಥಳೀಯ ಕಾಂಗ್ರೆಸ್ ಶಾಸಕರು ಹಾಗೂ ಅವರ ಆಪ್ತರ ನೇರ ಹಸ್ತಕ್ಷೇಪವಿದೆ ಎಂದು ಆರೋಪಿಸಿದರು. ಶಾಸಕರ ಅಣತಿಯಂತೆ ಪೊಲೀಸ್ ಇಲಾಖೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ಅಗತ್ಯವಾಗಿದೆ ಎಂದು ಹೇಳಿದರು.

ಸಾಗರ ಹಾಗೂ ಹೊಸನಗರ ಭಾಗದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದೌರ್ಜನ್ಯವನ್ನು ಪಕ್ಷ ಎಂದಿಗೂ ಸಹಿಸುವುದಿಲ್ಲ. ವಿದ್ಯುತ್ ಸಮಸ್ಯೆ, ಬಗರಕುಂ ರೈತರ ಸಮಸ್ಯೆ ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವ ಬದಲು ಸ್ಥಳೀಯ ಶಾಸಕರು ದ್ವೇಷ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು. ಈ ಪ್ರಕರಣಗಳ ಬಗ್ಗೆ ಸತ್ಯ ಹೊರಬರುವವರೆಗೂ ಹೋರಾಟ ಮುಂದುವರಿಸುವುದಾಗಿ ಘೋಷಿಸಿ, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಅರಗ ಜ್ಞಾನೇಂದ್ರ, ಶಿವಮೊಗ್ಗ ಶಾಸಕ ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯ ಡಿ.ಎಸ್. ಅರುಣ್, ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಬಿಜೆಪಿ ತಾಲೂಕು ಅಧ್ಯಕ್ಷ ಎನ್ ಸತೀಶ್ ಸೇರಿದಂತೆ ಟಿ.ಡಿ. ಮೇಘರಾಜ್, ಎಂ.ಎನ್. ಸುಧಾಕರ್, ಪದ್ಮಿನಿ ರಾವ್, ಉಮೇಶ್ ಕಂಚುಗಾರ್, ಆರ್.ಟಿ. ಗೋಪಾಲ್, ಹಾಲಗದ್ದೆ ಉಮೇಶ್, ವೀರೇಶ್ ಅಲವಳ್ಳಿ, ಸುರೇಶ್, ಸ್ವಾಮಿರಾಮ್ ಮುಂತಾದ ಪ್ರಮುಖ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

About The Author