The 77th Republic Day was celebrated grandly at Nehru Maidan in Hosanagara. Tahsildar Bharathraj highlighted constitutional values, unity in diversity, and democratic ideals of India.
ಹೊಸನಗರದಲ್ಲಿ 77ನೇ ಗಣರಾಜ್ಯೋತ್ಸವ |ಸ್ವತಂತ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡುವ ಪಣ ತೊಡೋಣ – ತಹಸೀಲ್ದಾರ್ ಭರತ್‌ರಾಜ್
ಹೊಸನಗರ: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಭಾರತ ದೇಶಕ್ಕೆ ನಮ್ಮದೇ ಆಡಳಿತವಿದ್ದು, ನಾವು ಸ್ವತಂತ್ರವಾಗಿ ಬದುಕುತ್ತಿದ್ದೇವೆ ಎನ್ನುವುದನ್ನು ಇಡೀ ಸಮಾಜ ಒಟ್ಟಾಗಿ ನೆನೆಸಿಕೊಂಡು ಶಪಥ ಮಾಡುವ ಪವಿತ್ರ ದಿನವೇ ಗಣರಾಜ್ಯೋತ್ಸವ ಎಂದು ಹೊಸನಗರ ತಹಸೀಲ್ದಾರ್ ಭರತ್‌ರಾಜ್ ಹೇಳಿದರು.
ಪಟ್ಟಣದ ನೆಹರು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಗಮನದಲ್ಲಿಟ್ಟುಕೊಂಡು ಅವರ ಬದುಕು ರೂಪಿಸುವ ಮಹತ್ತಾದ ಗ್ರಂಥವೇ ನಮ್ಮ ಸಂವಿಧಾನ ಎಂದು ಹೇಳಿದರು. ಹಲವು ಭಾಷೆ, ಧರ್ಮ, ಸಂಸ್ಕೃತಿಗಳಿಂದ ಕೂಡಿದ ಭಾರತ ವೈವಿಧ್ಯದಲ್ಲಿಯೇ ಏಕತೆಯನ್ನು ಸಾರುವ ರಾಷ್ಟ್ರವಾಗಿದ್ದು, ಐಕ್ಯತೆ ಮತ್ತು ಸಮಗ್ರತೆಯನ್ನು ಕಾಪಾಡಿಕೊಂಡು ಸದೃಢವಾಗಿ ಬೆಳೆಯುತ್ತಿದೆ ಎಂದರು.
ಸಮಾಜದ ಶ್ರೇಯೋಭಿವೃದ್ಧಿಯೇ ಸಂವಿಧಾನದ ಅಂತಿಮ ಆಶಯ ಎಂಬ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮಾತನ್ನು ನೆನಪಿಸಿಕೊಂಡು, ಅವರ ಆಶಯದಂತೆ ನಡೆದು ಅಭಿವೃದ್ಧಿಯ ಪಥದಲ್ಲಿ ಮುಂದುವರೆಯಬೇಕು ಎಂದು ಕರೆ ನೀಡಿದರು. ಗುರುದೇವ ರವೀಂದ್ರನಾಥ ಠಾಗೂರರ ಮಾತಿನಂತೆ ಮೇಲು–ಕೀಳು ಭೇದ ಮರೆತು ಸಹಬಾಳ್ವೆಯ ರಾಷ್ಟ್ರ ನಿರ್ಮಿಸೋಣ, ಸ್ನೇಹ–ಪ್ರೀತಿ–ಸೋದರಭಾವ ನಮ್ಮ ಜೀವಾಳವಾಗಲಿ ಎಂದು ಹೇಳಿದರು. ಈ 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಹೊಸ ನಾಳೆಯ ಭಾರತ ನಿರ್ಮಾಣಕ್ಕೆ ಹಿರಿಯರು ಕಂಡ ಕನಸನ್ನು ಇನ್ನಷ್ಟು ಸಾಕಾರಗೊಳಿಸುವ ಪಣ ತೊಡೋಣ ಎಂದರು.
ಕಾರ್ಯಕ್ರಮದ ಅಂಗವಾಗಿ ವಿವಿಧ ಶಾಲಾ ಮಕ್ಕಳಿಂದ ಪಥಸಂಚಲನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಾಲ್ಲೂಕಿಗೆ ವಿವಿಧ ಕ್ಷೇತ್ರಗಳಲ್ಲಿ ಕೀರ್ತಿ ತಂದ ಗಣ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಹೊಸನಗರ ಪೊಲೀಸ್ ವೃತ್ತ ನಿರೀಕ್ಷಕ ಗೌಡಪ್ಪ ಗೌಡರ್, ಪಿಎಸ್ಐ ಶಂಕರಗೌಡ ಪಾಟೀಲ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗಣೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ನೌಕರರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿ ಗಣರಾಜ್ಯೋತ್ಸವಕ್ಕೆ ಮೆರಗು ನೀಡಿದರು.













