The fact that those who conspired against Dharmasthala are in jail is a testament to the power of faith and trust. He appealed to devotees not to listen to false propaganda.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಬದುಕು ಹಸನ – ಶಾಸಕ ಗೋಪಾಲಕೃಷ್ಣ ಬೇಳೂರು

Dharmasthala Rural Development Project will improve rural life – MLA Gopalakrishna Belur
ರಿಪ್ಪನ್‌ಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗ್ರಾಮೀಣ ಜನರ ಬದುಕು ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಸನಾಗಿದ್ದು, ಶಿಸ್ತು–ಸಂಸ್ಕಾರಗಳೊಂದಿಗೆ ದುಡಿಯುವ ಮನೋಭಾವಕ್ಕೆ ಉತ್ತೇಜನ ದೊರೆತಿದೆ ಎಂದು ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾಭಿವೃದ್ಧಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ಕೆಂಚನಾಲ ಗ್ರಾಮದ ಮಾರಿಕಾಂಬ ದೇವಸ್ಥಾನದ ಬಳಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್, ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ವ್ರತ ವ್ಯವಸ್ಥಾಪನಾ ಸಮಿತಿ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ (ರಿಪ್ಪನ್‌ಪೇಟೆ ವಲಯ) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣಸ್ವಾಮಿ ವ್ರತ ಮತ್ತು ಒಕ್ಕೂಟದ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಶ್ರಮದ ಹಣವನ್ನು ದುರುಪಯೋಗಪಡಿಸಿಕೊಂಡು ಮಧ್ಯವ್ಯಸನಕ್ಕೆ ಒಳಗಾಗಿದ್ದ ಪುರುಷರನ್ನು ದುಡಿಯುವ ಜೀವನದತ್ತ ಮರಳುವಂತೆ ಪ್ರೇರೇಪಿಸಿದ ಕೀರ್ತಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಲ್ಲುತ್ತದೆ ಎಂದರು. ಯೋಜನೆಯಿಂದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ, ಆರೋಗ್ಯ–ವಸತಿ ಯೋಜನೆಗಳಿಂದ ಸಂಕಷ್ಟದಲ್ಲಿದ್ದ ಅನೇಕ ಕುಟುಂಬಗಳು ಇಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಿದೆ. ಮೂಢನಂಬಿಕೆಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದವರೇ ಜೈಲು ಪಾಲಾಗಿರುವುದು ನಂಬಿಕೆ–ವಿಶ್ವಾಸದ ಶಕ್ತಿಗೆ ಸಾಕ್ಷಿ. ಅಪಪ್ರಚಾರಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು. ಗ್ರಾಮಾಭಿವೃದ್ಧಿ ಯೋಜನೆಯಡಿ ಕೆರೆಗಳ ಪುನಶ್ಚೇತನಕ್ಕೆ ಸರ್ಕಾರದ ಅನುದಾನ ನೀಡಲಾಗುತ್ತಿದ್ದು, ಇದರಿಂದ ಅಂತರ್ಜಲ ವೃದ್ಧಿಯಾಗಿ ರೈತರು, ಪ್ರಾಣಿ–ಪಕ್ಷಿಗಳಿಗೆ ಲಾಭವಾಗಲಿದೆ; ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕೆಂಚನಾಲ ಶ್ರೀ ಸತ್ಯನಾರಾಯಣಸ್ವಾಮಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಅನಿಲ್ ಕುಮಾರ್ ಕೆ.ಓ ವಹಿಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಜಿಲ್ಲಾ ಸಂಚಾಲಕ ಡಾ. ಗಣೇಶ್ ಆರ್. ಕೆಂಚನಾಲ ಉಪನ್ಯಾಸ ನೀಡಿದರು.
ಹೊಸನಗರ ತಾಲ್ಲೂಕು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಆರ್ ಮಾತನಾಡಿ, ತಾಲ್ಲೂಕಿನಲ್ಲಿ 19 ವರ್ಷಗಳಿಂದ ಮೂರು ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು, 22,412 ಫಲಾನುಭವಿಗಳಿಗೆ ಜಾಮೀನು ರಹಿತ ಸಾಲ ನೀಡಲಾಗಿದೆ. ಸಾಲಕ್ಕೆ ಸೀಮಿತವಾಗದೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, 196 ನಿರ್ಗತಿಕ ಕುಟುಂಬಗಳು ಹಾಗೂ 89 ಹಿರಿಯರಿಗೆ ಮಾಸಾಶನ ನೀಡಲಾಗುತ್ತಿದೆ. ಏಳು ಕೆರೆಗಳ ಪುನಶ್ಚೇತನ, ಸುಜ್ಞಾನ ಯೋಜನೆಯಡಿ 170 ವಿದ್ಯಾರ್ಥಿಗಳಿಗೆ ₹6.26 ಲಕ್ಷ, ಕನ್ನಡ ಶಾಲೆಗಳ ಉಳಿವಿಗೆ 16 ಶಾಲೆಗಳಿಗೆ 100 ಬೆಂಚುಗಳಿಗೆ ₹7 ಲಕ್ಷ ಸೇರಿದಂತೆ ಒಟ್ಟು ₹7 ಕೋಟಿ ಅನುದಾನ ನೀಡಲಾಗಿದೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ತಾಲ್ಲೂಕು ಪಂಚಾಯತ್ ಮಾಜಿ ಅಧ್ಯಕ್ಷ ವೀರೇಶ ಅಲವಳ್ಳಿ, ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮದ್ ಷರೀಫ್, ಸದಸ್ಯರಾದ ಉಭೇದುಲ್ಲಾ ಷರೀಫ್, ಗೌರಮ್ಮ, ಪುಟ್ಟಮ್ಮ, ಪರಮೇಶ, ದಿವಾಕರ, ವೇದಾಕ್ಷಿ, ಅಶ್ವಿನಿ ರವಿಶಂಕರ್ ಮತ್ತಿತರರು ಭಾಗವಹಿಸಿದ್ದರು.
ಪ್ರಣತಿ ಆಣ್ಣಪ್ಪ ಪ್ರಾರ್ಥನೆ ಸಲ್ಲಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವಲಯ ಮೇಲ್ವಿಚಾರಕ ಕೆ.ಆರ್. ನಟರಾಜ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.