Headlines

ರಿಪ್ಪನ್‌ಪೇಟೆಯಲ್ಲಿ ಕನ್ನಡಾಂಬೆಯ ಭವ್ಯ ಮೆರವಣಿಗೆ – ಕಲಾಕೌಸ್ತುಭ ಸಂಘದಿಂದ ಅದ್ದೂರಿ ರಾಜ್ಯೋತ್ಸವ ಸಂಭ್ರಮ

ರಿಪ್ಪನ್‌ಪೇಟೆಯಲ್ಲಿ ಕನ್ನಡಾಂಬೆಯ ಭವ್ಯ ಮೆರವಣಿಗೆ – ಕಲಾಕೌಸ್ತುಭ ಸಂಘದಿಂದ ಅದ್ದೂರಿ ರಾಜ್ಯೋತ್ಸವ ಸಂಭ್ರಮ

ರಿಪ್ಪನ್ ಪೇಟೆ : ಪಟ್ಟಣದ ಕಲಾಕೌಸ್ತುಭ ಕನ್ನಡ ಸಂಘದ 32ನೇ ವರ್ಷದ ವಾರ್ಷಿಕೋತ್ಸವ ಮತ್ತು 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾದ ಕರುನಾಡ ಕನ್ನಡ ಹಬ್ಬದ ಸಂಭ್ರಮಾಚರಣೆಯ ಕನ್ನಡಾಂಬೆಯ ಭವ್ಯ ಮೆರವಣಿಗೆ ಜನಮೆಚ್ಚುಗೆ ಗಳಿಸಿತು. ಮಹಿಳಾ ಡೊಳ್ಳುಕುಣಿತ, ವೀರಗಾಸೆ, ಮಕ್ಕಳ ಛದ್ಮವೇಷಗಳ ಕಲಾಕರ್ಷಣೆ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.

ಕನ್ನಡಾಂಬೆಯ ಮೆರವಣಿಗೆಗೆ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಜುರೆಡ್ಡಿ ಕನ್ನಡ ಬಾವುಟವನ್ನು ಎತ್ತಿಹಿಡಿದು ಚಾಲನೆ ನೀಡಿ ಮಾತನಾಡಿದರು. “ಕನ್ನಡ ನವೆಂಬರ್ ತಿಂಗಳಿಗೆ ಸೀಮಿತವಾಗದೆ ಪ್ರತಿದಿನದ ಹೃದಯ ಭಾಷೆಯಾಗಬೇಕು. ಕರ್ನಾಟಕದ ಸಂಸ್ಕೃತಿ, ಪರಂಪರೆ ಮತ್ತು ಸಿರಿ-ಸಂಪತ್ತು ವಿಶ್ವದಾದ್ಯಂತ ಕನ್ನಡದ ಹೆಮ್ಮೆ ಹೆಚ್ಚಿಸುತ್ತಿವೆ. ಇಂತಹ ಕಾರ್ಯಕ್ರಮಗಳು ಯುವಪೀಳಿಗೆಯಲ್ಲಿ ಸಂಸ್ಕೃತಿ ಸಂರಕ್ಷಣೆಗೆ ಪ್ರೇರಣೆ ನೀಡಬೇಕು,” ಎಂದು ಅವರು ಹೇಳಿದರು.

ಕಲಾಕೌಸ್ತುಭ ಸಂಘದ ಮಾಜಿ ಅಧ್ಯಕ್ಷ ಎಂ.ಬಿ. ಮಂಜುನಾಥ ಕನ್ನಡ ಧ್ವಜಾರೋಹಣ ನೆರವೇರಿಸಿದರು. ಸಂಘದ ಅಧ್ಯಕ್ಷ ಮುರುಳಿಧರ ಕೆರೆಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯೋತ್ಸವ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತ್ ಅಧ್ಯಕ್ಷೆ ಧನಲಕ್ಷ್ಮಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯರು ಮಹಾಲಕ್ಷ್ಮಿ, ಅಶ್ವಿನಿ ರವಿಶಂಕರ್, ದೀಪಾ ಸುಧೀರ್, ವಿನೋಧ, ರವೀಂದ್ರ ಕೆರೆಹಳ್ಳಿ, ಎಂ. ಸುರೇಶಸಿಂಗ್, ತ.ಮ. ನರಸಿಂಹ, ಪದ್ಮಾ ಸುರೇಶ್, ಉಮಾ ಸುರೇಶ್, ನಿವೃತ್ತ ಯೋಧೆ ಪದ್ಮಾ ಹಾಗು ಇತರ ಗಣ್ಯರು ಭಾಗವಹಿಸಿ ಮಾತನಾಡಿದರು.

ನಾಗರತ್ನ ದೇವರಾಜ್ ಪ್ರಾರ್ಥನೆ ಸಲ್ಲಿಸಿದರು. ರವೀಂದ್ರ ಕೆರೆಹಳ್ಳಿ ಸ್ವಾಗತಿಸಿದರು ಮತ್ತು ಉಮಾ ಸುರೇಶ್ ಕಾರ್ಯಕ್ರಮದ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಕನ್ನಡ ಭುವನೇಶ್ವರಿಯ ಜಯಘೋಷಣೆ ಕೂಗಿ, ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಅದ್ಧೂರಿ ಮೆರವಣಿಗೆ ನಡೆಸುವ ಮೂಲಕ ರಾಜ್ಯೋತ್ಸವದ ಸಂಭ್ರಮ ಹೆಚ್ಚಿಸಿದರು.