



ಜಿಲ್ಲಾ ಯೋಜನಾ ಸಮಿತಿ ಸಭೆ : ಸ್ಥಳೀಯ ಸಂಸ್ಥೆಗಳ ಯೋಜನೆಗೆ ಅನುದಾನ ಬೇಡಿಕೆ : ಮಧು ಬಂಗಾರಪ್ಪ
ಶಿವಮೊಗ್ಗ : 2026-27 ನೇ ಸಾಲಿಗೆ ಜಿಲ್ಲಾ ಪಂಚಾಯತ್, ತಾ.ಪಂ, ಗ್ರಾ.ಪಂ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವಾರ್ಷಿಕ ಕರಡು ಅಭಿವೃದ್ದಿ ಯೋಜನೆಗೆ ರೂ. 68 ಸಾವಿರ ಕೋಟಿ ಅನುದಾನ ಬೇಡಿಕೆಗೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.
ಶುಕ್ರವಾರ ಜಿ.ಪಂ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ 2025-26 ನೇ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ವಿವಿಧ ಇಲಾಖೆಗಳಡಿ ಮೂಲಭೂತ ಸೌಕರ್ಯ ಹಾಗೂ ಅಭಿವೃದ್ದಿ ಕಾಮಗಾರಿಗಳಿಗೆ ರೂ.68 ಸಾವಿರ ಕೋಟಿ ಅನುದಾನ ಬೇಡಿಕೆ ಕುರಿತು ಸಭೆ ಚರ್ಚೆ ನಡೆಸಲಿದೆ ಎಂದರು.
ತೀರ್ಥಹಳ್ಳಿ ಶಾಸಕರಾದ ಆರಗ ಜ್ಞಾನೇಂದ್ರ ಮಾತನಾಡಿ, ಯೋಜನಾ ಸಮಿತಿ ಸಭೆಗೆ ಸಂಬಂಧಿಸಿದಂತೆ ತಾಲ್ಲೂಕುಗಳಲ್ಲಿ ಪೂರ್ವಭಾವಿ ಸಭೆ ಆಗಿಲ್ಲ. ಶಾಸಕರ ಅನುಮೋದನೆ ಪಡೆದಿಲ್ಲ. ಆದ್ದರಿಂದ ತಾಲ್ಲೂಕು ಇಓ ಗಳು ಜಿಲ್ಲಾ ಸಭೆ ಕುರಿತು ಶಾಸಕರ ಗಮನಕ್ಕೆ ತಂದು ಜಿಲ್ಲಾ ಯೋಜನಾ ಸಮಿತಿ ಸಭೆ ಮಾಡಬೇಕೆಂದರು.
ಶಾಸಕರಾದ ಶಾರದಾ ಪೂರ್ಯಾಯ್ಕರವರು ಮಾತನಾಡಿ, ಜಿಲ್ಲಾ ಯೋಜನಾ ಸಮಿತಿ ಸಭೆಯನ್ನು ವ್ಯವಸ್ಥಿತವಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ಸಚಿವರು ಪ್ರತಿಕ್ರಿಯಿಸಿ, ತಾಲ್ಲೂಕುಗಳಲ್ಲಿ ಸೋಮವಾರವೇ ಕರಡು ಅಭಿವೃದ್ದಿ ಯೋಜನೆಗೆ ಸಂಬAಧಿಸಿದಂತೆ ಪೂರ್ವಭಾವಿ ಸಭೆ ನಡೆಸಿ, ಶಾಸಕರ ಅನುಮೋದನೆ ಪಡೆದ ನಂತರ ಜಿಲ್ಲಾ ಸಭೆ ನಡೆಸೋಣ ಎಂದರು.
ಜಿ.ಪಂ ಯೋಜನಾ ನಿರ್ದೇಶಕ ಹನುಮನಾಯಕ್ ಮಾತನಾಡಿ, ಭದ್ರಾವತಿ ನಗರಸಭೆ ಮತ್ತು ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯಿಂದ ಆರು ಜನ ಸದಸ್ಯರು ಸಮಿತಿಗೆ ಅವಿರೋಧ ಆಯ್ಕೆಯಾಗಿದ್ದು, ಸಮಿತಿ ಸಭೆಗೂ ಮುನ್ನ ಮೂರು ಹಂತದಲ್ಲಿ ಕ್ರಿಯಾ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದರು.
ಜಿ.ಪಂ ಸಿಇಓ ಹೇಮಂತ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ಬಾಲ್ಯ ವಿವಾಹ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು ಮಿಷನ್ ಸುರಕ್ಷಾ ಅಭಿಯಾನ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಕಳೆದ 5 ತಿಂಗಳಿಂದ ಸತತವಾಗಿ ಜಾಗೃತಿ ಮೂಡಿಸಲಾಗುತ್ತಿದ್ದು ಸೆಪ್ಟೆಂಬರ್ ಮಾಹೆಯಿಂದ ಇಲ್ಲಿಯವೆಗೆ 25 ಬಾಲ್ಯ ವಿವಾಹಗಳನ್ನು ತಡೆಗಟ್ಟಲಾಗಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ 22 ಕ್ರಿಯಾ ಯೋಜನೆ ರೂಪಿಸಿ ಕ್ರಮ ವಹಿಸಲಾಗುತ್ತಿದೆ. ಗ್ರಾಮಗಳಲ್ಲಿ ಹೆಚ್ಚಿನ ಸಮಸ್ಯೆ ಇರುವ ಮಕ್ಕಳನ್ನು ಗ್ರಾ.ಪಂ ವತಿಯಿಂದ ದತ್ತು ತೆಗೆದುಕೊಳ್ಳಲಾಗುತ್ತಿದೆ ಎಂದರು.
ದಸರಾ ಶಿಬಿರದಲ್ಲಿ ‘ನಮ್ಮ ಊರು ನಮ್ಮ ಬೇರು’ ಕಾರ್ಯಕ್ರಮದಡಿ ಗ್ರಾ.ಪಂ ಗಳ ಗ್ರಂಥಾಲಯಲಕ್ಕೆ ಬರುವ ಮಕ್ಕಳಿಂದ ರಾಜಕೀಯ, ಆಡಳಿತ, ಸಾಮಾಜಿಕ, ಆರ್ಥಿಕ, ನಾಗರೀಕರತೆ ಹೀಗೆ ವಿವಿಧ ವಿಷಯಗಳನ್ನೊಳಗೊಂಡ ‘ಪರಂಪರೆ’ ಎಂಬ ಪುಸ್ತಕವನ್ನು ಗ್ರಾ.ಪಂ ಗಳ ಗ್ರಂಥಾಲಯಗಳಿಂದ ಪ್ರಕಟಿಸಿದ್ದು, ಅತ್ಯುತ್ತಮವಾಗಿ ಪ್ರಕಟಿಸಿದ ನಾಲ್ಕು ಗ್ರಾ.ಪಂ ಗ್ರಂಥಾಲಯಗಳಾದ ಹೊಸನಗರದ ಹರಿದ್ರಾವತಿ ಗ್ರಾ.ಪಂ, ಸಾಗರದ ಹಿರೇನಲ್ಲೂರು ಗ್ರಾ.ಪಂ, ತೀರ್ಥಹಳ್ಳಿಯ ಬೆಜ್ಜವಳ್ಳಿ ಹಾಗೂ ಸೊರಬದ ಕುಪ್ಪೆಗುಡ್ಡೆ ಗ್ರಾ.ಪಂ ಗ್ರಂಥಾಲಯಗಳಿಗೆ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು.
ಸಭೆಯಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಎಸ್.ಎನ್.ಚನ್ನಬಸಪ್ಪ, ಎಂಎಡಿಬಿ ಅಧ್ಯಕ್ಷರಾದ ಆರ್ ಎಂ ಮಂಜುನಾಥ ಗೌಡ, ಸಮಿತಿ ಸದಸ್ಯರು, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಗಳು ಹಾಜರಿದ್ದರು.