January 11, 2026

ಪ್ರೀತಿಸಿ ಮದುವೆಯಾದ ಪತ್ನಿಗೆ ಜಾತಿ ನಿಂದನೆ – ಪತಿಗೆ ನಾಲ್ಕು ವರ್ಷದ ಕಠಿಣ ಶಿಕ್ಷೆ

GridArt_20251127_190351774

ಪ್ರೀತಿಸಿ ಮದುವೆಯಾದ ಪತ್ನಿಗೆ ಜಾತಿ ನಿಂದನೆ – ಪತಿಗೆ ನಾಲ್ಕು ವರ್ಷದ ಕಠಿಣ ಶಿಕ್ಷೆ

ಶಿವಮೊಗ್ಗ: ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಜಾತಿ ನಿಂದನೆ ಮಾಡಿದ ದೋಷ ದೃಢಪಟ್ಟ ಹಿನ್ನೆಲೆಯಲ್ಲಿ, ಶಿಕಾರಿಪುರ ತಾಲ್ಲೂಕಿನ ಹಿತ್ತಲ ಗ್ರಾಮದ ಗೌಡರ ಬೀದಿ ನಿವಾಸಿ ಎಸ್‌.ಈ. ಚಿದಾನಂದ (43) ಅವರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯವು ನಾಲ್ಕು ವರ್ಷದ ಕಠಿಣ ಶಿಕ್ಷೆ ಹಾಗೂ ₹11.05 ಲಕ್ಷ ದಂಡವನ್ನು ವಿಧಿಸಿದೆ.

ದಂಡ ಪಾವತಿಸಲು ವಿಫಲವಾದಲ್ಲಿ, ಹೆಚ್ಚುವರಿಯಾಗಿ 1.02 ವರ್ಷದ ಸಾದಾ ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ಆದೇಶಿಸಿದೆ. ವಿಧಿಸಿದ ದಂಡದ ಮೊತ್ತದಲ್ಲಿ ₹1 ಲಕ್ಷವನ್ನು ಸಂತ್ರಸ್ತೆಯ ಪರವಾಗಿ ಪಾವತಿಸಲು ಸೂಚಿಸಲಾಗಿದೆ.

ಘಟನೆ ಹಿನ್ನಲೆ:
2020ರ ಮೇ 14ರಂದು ಚಿದಾನಂದ ಅವರು ಬೈರನಕೊಪ್ಪದ ಪರಿಶಿಷ್ಟ ಜಾತಿಯ ಯುವತಿಯನ್ನು ಶಿವಮೊಗ್ಗದ ಗುಡೇಕಲ್ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಅದೇ ವರ್ಷದ ಡಿಸೆಂಬರ್‌ನಲ್ಲಿ ಮದುವೆಯನ್ನು ನೊಂದಾಯಿಸಲಾಗಿತ್ತು. ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರೂ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗದೆ ತವರು ಮನೆಯಲ್ಲಿ ಬಿಟ್ಟು ಹೋಗಿದ್ದಾನೆ.

2023ರ ಜನವರಿಯಲ್ಲಿ, ತಮಗೆ ಮನೆಗೆ ಕರೆದುಕೊಂಡು ಹೋಗುವಂತೆ ಪತ್ನಿ ಕೇಳಿದಾಗ, ಚಿದಾನಂದ ನಿರಾಕರಿಸಿ ಜಾತಿ ನಿಂದನೆ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ. ಈ ಬಗ್ಗೆ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಅಂದಿನ ಡಿವೈಎಸ್ಪಿ ಎಂ. ಸುರೇಶ್ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶೆ ಕೆ.ಪಿ. ಪ್ರೀತಿ, ಆರೋಪಿಗಳ ವಿರುದ್ಧ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

About The Author