Headlines

ಪತ್ನಿಯ ಕಿರುಕುಳ ತಾಳಲಾರದೆ ಯುವಕ ಆತ್ಮ*ಹತ್ಯೆ – ಸಾವಿಗೂ ಮುಂಚೆ ವೀಡಿಯೋ ಮೂಲಕ ಪತ್ನಿಯ ಬಗ್ಗೆ ಆರೋಪ

ಪತ್ನಿಯ ಕಿರುಕುಳ ತಾಳಲಾರದೆ ಯುವಕ ಆತ್ಮ*ಹತ್ಯೆ – ಸಾವಿಗೂ ಮುಂಚೆ ವೀಡಿಯೋ ಮೂಲಕ ಪತ್ನಿಯ ಬಗ್ಗೆ ಆರೋಪ

ಕೇವಲ ಐದು ತಿಂಗಳ ಹಿಂದೆ ವಿವಾಹವಾಗಿದ್ದ ಯುವಕನೊಬ್ಬ, ಪತ್ನಿಯಿಂದ ತೀವ್ರ ಕಿರುಕುಳ ಮತ್ತು ಮಾನಸಿಕ ಹಿಂಸೆಯನ್ನು ತಾಳಲಾರದೇ ರೈಲಿಗೆ ತಲೆಕೊಟ್ಟು ಆತ್ಮಹ*ತ್ಯೆ ಮಾಡಿಕೊಂಡಿರುವ ದುರ್ಘಟನೆ ಬಿಡದಿ ರೈಲ್ವೆ ನಿಲ್ದಾಣದ ಸಮೀಪ ನಿನ್ನೆ (ಅ.20) ಸಂಜೆ ನಡೆದಿದೆ.

ಮೃತ ಯುವಕ ಸಾವಿಗೆ ಮೊದಲು ತಮ್ಮ ನೋವು ಮತ್ತು ಸಾವಿಗೆ ಕಾರಣರಾದವರ ಬಗ್ಗೆ ವಿಡಿಯೋ ಮಾಡಿಟ್ಟಿದ್ದು, ಪ್ರಕರಣಕ್ಕೆ ಮಹತ್ವದ ತಿರುವು ನೀಡಿದೆ.

ಸಾವಿಗೆ ಶರಣಾದ ಯುವಕನನ್ನು ಹಾರೋಹಳ್ಳಿ ತಾಲೂಕಿನ ಅಣ್ಣೆದೊಡ್ಡಿ ಗ್ರಾಮದ ರೇವಂತ್ ಕುಮಾರ್ (30) ಎಂದು ಗುರುತಿಸಲಾಗಿದೆ. ಬಿಡದಿಯ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ರೇವಂತ್, ನಿನ್ನೆ ಸಂಜೆ ಸಮಯದಲ್ಲಿ ರೈಲ್ವೆ ಹಳಿಗೆ ತಲೆಕೊಟ್ಟು ಇಹಲೋಕ ತ್ಯಜಿಸಿದ್ದಾರೆ.

ಮೊಬೈಲ್‌ನಲ್ಲಿ ವಿಡಿಯೋ ಪತ್ತೆ, ಪತ್ನಿ ವಿರುದ್ಧ ನೇರ ಆರೋಪ:

ಘಟನೆಯ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದಾಗ, ರೇವಂತ್ ಅವರ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಪರಿಶೀಲಿಸಿದಾಗ, ರೇವಂತ್ ಅವರು ಆತ್ಮಹ*ತ್ಯೆಗೆ ಕೆಲವೇ ಕ್ಷಣಗಳ ಮೊದಲು ರೆಕಾರ್ಡ್ ಮಾಡಿದ ವಿಡಿಯೋವೊಂದು ಲಭ್ಯವಾಗಿದೆ. ಈ ವಿಡಿಯೋದಲ್ಲಿ ಯುವಕ ಕಣ್ಣೀರಿನೊಂದಿಗೆ ತನ್ನ ನೋವಿನ ಕತೆಯನ್ನು ಹೇಳಿಕೊಂಡಿದ್ದಾನೆ.

ನನ್ನಿಂದ ಬದುಕಲು ಆಗುತ್ತಿಲ್ಲ. ಮದುವೆಯಾಗಿ ಕೇವಲ 5 ತಿಂಗಳಾಗಿದೆ. ಆದರೆ, ನನ್ನ ಪತ್ನಿ ಮಲ್ಲಿಕಾ ನನಗೆ ತುಂಬಾ ಕಿರುಕುಳ ಕೊಡುತ್ತಿದ್ದಾಳೆ. ಆಕೆಯಿಂದ ನನಗೆ ತುಂಬಾ ಟಾರ್ಚರ್ ಆಗಿದೆ. ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾಳೆ. ನನಗೆ ಬದುಕುವ ಆಸಕ್ತಿಯೇ ಇಲ್ಲದಂತಾಗಿದೆ. ನನ್ನ ಈ ಸಾವಿಗೆ ನನ್ನ ಹೆಂಡತಿಯೇ ಕಾರಣ ಎಂದು ಆರೋಪಿಸಿ, ವಿಡಿಯೋ ಮಾಡಿದ ನಂತರ ಆತ್ಮಹ*ತ್ಯೆಗೆ ಶರಣಾಗಿದ್ದಾರೆ.

ಐದು ತಿಂಗಳ ದಾಂಪತ್ಯದ ದುರಂತ ಅಂತ್ಯ:

ಕೇವಲ 5 ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ರೇವಂತ್ ಮತ್ತು ಮಲ್ಲಿಕಾ ನಡುವೆ ಮದುವೆಯಾದ ಕೆಲವೇ ದಿನಗಳಲ್ಲಿ ಕೌಟುಂಬಿಕ ಕಲಹಗಳು ಶುರುವಾಗಿದ್ದವು ಎನ್ನಲಾಗಿದೆ. ದಿನೇ ದಿನೇ ಈ ಕಲಹಗಳು ಉಲ್ಬಣಗೊಂಡು ರೇವಂತ್ ತೀವ್ರ ಮಾನಸಿಕ ಹಿಂಸೆಗೆ ಒಳಗಾಗಿದ್ದರು. ಕಾರ್ಖಾನೆಯಲ್ಲಿ ದುಡಿದು ಮನೆ ನಿರ್ವಹಿಸುತ್ತಿದ್ದರೂ, ಕೌಟುಂಬಿಕ ನೆಮ್ಮದಿ ಇಲ್ಲದೆ ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ. ರೇವಂತ್ ಅವರ ಈ ಆತ್ಮಹ*ತ್ಯೆಯು ಅಣ್ಣೆದೊಡ್ಡಿ ಗ್ರಾಮ ಮತ್ತು ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ದುಃಖ ಮತ್ತು ಆಶ್ಚರ್ಯಕ್ಕೆ ಕಾರಣವಾಗಿದೆ.

ಮೃತನ ಕುಟುಂಬಸ್ಥರು ಕೂಡ ವಿಡಿಯೋದ ಆಧಾರದ ಮೇಲೆ ರೇವಂತ್ ಪತ್ನಿ ಮಲ್ಲಿಕಾ ವಿರುದ್ಧ ಕಿರುಕುಳದ ಆರೋಪ ಮಾಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಡಿಯೋ ಮತ್ತು ಕುಟುಂಬದವರ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ಯುವಕನ ಪತ್ನಿ ಮಲ್ಲಿಕಾ ಅವರನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ತನಿಖೆ ನಡೆಸಲಿದ್ದಾರೆ.