Headlines

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು

ಹುಂಚ ಅಡಿಕೆ ತೋಟದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆ – ಅಧಿಕಾರಿಗಳ ತುರ್ತು ಭೇಟಿ ,ತನಿಖೆ ಚುರುಕು

ಹುಂಚ ಭಾಗದಲ್ಲಿ ಕಾಡುಕೋಣಗಳ ಮಾರಣಹೋಮಕ್ಕೆ ಅಂತ್ಯ ಯಾವಾಗ?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಗ್ರಾಮದ ಸರ್ವೆ ನಂ. 52/2 ರಲ್ಲಿ ರಾಮಪ್ಪ ಬಿನ್ ಮರಿಯಪ್ಪ ಅವರ ಅಡಿಕೆ ತೋಟದ ಹೊಂಡದಲ್ಲಿ ಎರಡು ಕಾಡುಕೋಣಗಳ ಶವ ಪತ್ತೆಯಾಗಿದ್ದು, ಈ ಘಟನೆ ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಸೋಮವಾರ ಬೆಳಿಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ವರದಿ ಹೊರಬಿದ್ದ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಜೆಸಿಬಿ ಸಹಾಯದಿಂದ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನೆರವೇರಿಸಿದರು. ಈ ಕಾರ್ಯದಲ್ಲಿ ಸಾಗರ ವಲಯದ ಡಿಸಿಎಫ್ ಮೋಹನ್ ಕುಮಾರ್, ಹೊಸನಗರ ಎಸಿಎಫ್ ಕೆ.ಬಿ. ಮೋಹನ್ ಕುಮಾರ್ ಹಾಗೂ ಆರ್‌ಎಫ್‌ಓ ಅನಿಲ್ ಕುಮಾರ್ ಪಾಲ್ಗೊಂಡಿದ್ದರು. ಪಶು ವೈದ್ಯಾಧಿಕಾರಿ ಫಣಿರಾಜ್ ಮರಣೋತ್ತರ ಪರೀಕ್ಷೆ ನಡೆಸಿದರು.

ಕಾಡುಕೋಣಗಳು ವಿಷಪ್ರಾಶನದಿಂದ ಮೃತಪಟ್ಟಿರಬಹುದು ಎಂದು ಪ್ರಾಥಮಿಕ ಶಂಕೆ ವ್ಯಕ್ತವಾಗಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗಳ ಪ್ರಕಾರ ಅವುಗಳು ಮೇವು ಹುಡುಕಿ ತೋಟಕ್ಕೆ ಬಂದು, 20 ಅಡಿ ಆಳದ ಹೊಂಡದಲ್ಲಿ ನೀರು ಕುಡಿಯಲು ಇಳಿದು ಹೊರಬರಲಾಗದೆ ಮುಳುಗಿ ಸಾವನ್ನಪ್ಪಿರಬಹುದು ಎಂಬ ಸಾಧ್ಯತೆ ಇದೆ. ನಿಖರ ಕಾರಣ ಮರಣೋತ್ತರ ವರದಿ ಬರುವವರೆಗೆ ಸ್ಪಷ್ಟವಾಗುವುದಿಲ್ಲ.

ಈಗಾಗಲೇ ಹುಂಚ ಹಾಗೂ ನಾಗರಹಳ್ಳಿ ವ್ಯಾಪ್ತಿಯಲ್ಲಿ ಅನೇಕ ಬಾರಿ ಕಾಡುಕೋಣಗಳ ಮಾರಣಹೋಮ ನಡೆದಿರುವುದು ಸಾಬೀತಾಗಿದೆ. 2024ರ ಜೂನ್‌ನಲ್ಲಿ ಅಕ್ರಮ ಬಂದೂಕು ಬಳಸಿ ನಾಲ್ಕಕ್ಕೂ ಹೆಚ್ಚು ಕಾಡುಕೋಣಗಳ ಹತ್ಯೆ ನಡೆದ ಪ್ರಕರಣವೂ ಬೆಳಕಿಗೆ ಬಂದಿತ್ತು. ಆ ವೇಳೆಯೂ ಅರಣ್ಯ ಇಲಾಖೆ ತನಿಖೆ ನಡೆಸಿ ಲ್ಯಾಬ್ ವರದಿಗೆ ಕಳಿಸಿತ್ತು.

ನಾಗರಹಳ್ಳಿ ಪ್ರಕರಣದ ನಂತರ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಗಸ್ತು ಹೆಚ್ಚಿಸಲು ಹಾಗೂ ವರದಿ ಸಲ್ಲಿಸಲು ಆದೇಶಿಸಿದ್ದರು. ಆದರೂ ಹುಂಚ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ಆತಂಕದ ಸಂಗತಿಯಾಗಿದ್ದು, ಕಾಡುಕೋಣಗಳ ಮಾರಣಹೋಮಕ್ಕೆ ಕಡಿವಾಣ ಬೀಳುವದನ್ನು ಕಾದು ನೋಡಬೇಕಾಗಿದೆ.