Headlines

ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ – ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ

ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ – ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ

ರಿಪ್ಪನ್ ಪೇಟೆ : ಪಟ್ಟಣದ ಗ್ರಾಮ ಪಂಚಾಯತ್ ಸದಸ್ಯ, ಯುವ ಮುಖಂಡ ಹಾಗೂ ಸಂಘಟನಾ ಚಾತುರ್ಯ ಹೊಂದಿದ ನಿರೂಪ್ ಕುಮಾರ್ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಈ ಭಾಗದ ಕಾಂಗ್ರೆಸ್ ಸಂಘಟನೆಗೆ ಹೊಸ ಉಜ್ವಲ ಶಕ್ತಿ ತುಂಬಿದಂತಾಗಿದೆ ಎಂದು ಜಿಪಂ ಮಾಜಿ ಸದಸ್ಯ ಬಿ.ಪಿ. ರಾಮಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಕುವೆಂಪು ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಬೇಳೂರು ಗೋಪಾಲಕೃಷ್ಣರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಅಧಿಕೃತವಾಗಿ ಸೇರ್ಪಡೆಯಾದ ನಿರೂಪ್ ಕುಮಾರ್ ಮುಂದಿನ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘಟನೆಯನ್ನು ಇನ್ನಷ್ಟು ಬಲಪಡಿಸಲಿದ್ದಾರೆ ಎಂದು ಹೇಳಿದರು.

ಮಾಜಿ ಜಿಪಂ ಸದಸ್ಯೆ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ವೇತಾ ಬಂಡಿ ಮಾತನಾಡಿ ಗ್ರಾಪಂ ಸದಸ್ಯರಾದ ನಿರೂಪ್ ಕುಮಾರ್ ಹಲವಾರು ತಿಂಗಳಿನಿಂದ ಮಾನಸಿಕವಾಗಿ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಅಧಿಕೃತವಾಗಿ ಸೇರಿರಲಿಲ್ಲ ಈಗ ನಮ್ಮೆಲ್ಲಾರ ಬೇಡಿಕೆಯಂತೆ ಶಾಸಕರ ಸಮ್ಮುಖದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಪಕ್ಷಕ್ಕೆ ದೊಡ್ಡ ಶಕ್ತಿ ತಂದಿದೆ, ಶಾಸಕ ಬೇಳೂರು ಗೋಪಾಲಕೃಷ್ಣ ರವರ ಅಭಿವೃದ್ಧಿ ಕಾರ್ಯಕ್ರಮಗಳು , ಸ್ನೇಹಮಯಿ ವ್ಯಕ್ತಿತ್ವ , ಹಾಗೂ ಪಕ್ಷದ ಗ್ಯಾರಂಟಿ ಯೋಜನೆಗಳು ಬೇರೆ ಪಕ್ಷದವರನ್ನು ಕಾಂಗ್ರೆಸ್ ಪಕ್ಷದತ್ತ ಸೆಳೆಯುವಂತೆ ಮಾಡಿದೆ ಎಂದರು.

ಗ್ರಾಪಂ ಸದಸ್ಯ ನಿರೂಪ್ ಕುಮಾರ್ ಮಾತನಾಡಿ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಅಭಿವೃದ್ಧಿ , ಸ್ನೇಹಮಯಿ ವ್ಯಕ್ತಿತ್ವ ಹಾಗೂ ನಾಯಕತ್ವ ನನಗೆ ಅತ್ಯಂತ ಪ್ರೇರಣೆಯಾಗಿದೆ. ಅವರು ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಹಾದಿಯಲ್ಲಿ ಸದಾ ಮುಂಚೂಣಿಯಲ್ಲಿದ್ದಾರೆ. ಅಭಿವೃದ್ಧಿ ಯೋಜನೆಗಳ ಮೂಲಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದುಕೊಟ್ಟಿದ್ದಾರೆ. ಇದೇ ಕಾರಣದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಧ್ವಜದಡಿ ಕೆಲಸ ಮಾಡುತ್ತಾ ಜನರ ಸೇವೆಗೆ ಸಮರ್ಪಿತರಾಗಿರುವೆ” ಎಂದು ಅಭಿಪ್ರಾಯಪಟ್ಟರು.

ನಿಮ್ಮೊಂದಿಗೆ ನಾಲ್ಕು ಜನ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಗುಮಾನಿ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ನಿರೂಪ್‌ಕುಮಾರ್ ಕೇವಲ ನಾಲ್ಕು ಜನ ಸದಸ್ಯರಲ್ಲ ಮುಂದಿನ ದಿನಗಳಲ್ಲಿ ಆರು ಜನ ಗ್ರಾಪಂ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು.

ಇದೇ ಸಂಧರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಶ್ವೇತಾ ಬಂಡಿ ರವರಿಗೆ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ವತಿಯಿಂದ ಸನ್ಮಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಈ ಸಂಧರ್ಭದಲ್ಲಿ ರಿಪ್ಪನ್ ಪೇಟೆ ಕಾಂಗ್ರೆಸ್ ಘಟಕದ ಅಧ್ಯಕ್ಷ ಗಣಪತಿ ಗವಟೂರು , ಮುಖಂಡರಾದ ಈಶ್ವರಪ್ಪ ಗೌಡ , ಆಸೀಫ಼್ ಭಾಷಾ , ಧನಲಕ್ಷ್ಮಿ ಗಂಗಾಧರ್ ,ಮಧುಸೂದನ್ ,ಪ್ರವೀಣ್ ಸುಳುಗೋಡು , ವೈ ಟಿ ಷಣ್ಮುಖ ,ಪ್ರಕಾಶ್ ಪಾಲೇಕರ್ , ವಾಣಿ ಗೋವಿಂದಪ್ಪ ಗೌಡ , ನವೀನ್ , ಶ್ರೀಧರ್ ಚಿಗುರು , ಅಪ್ಸರ್ , ಮುತ್ತಲಿಬ್ ಹಾಗೂ ಇನ್ನಿತರರು ಇದ್ದರು.