ಕನ್ನಡ ಶಿಕ್ಷಕರನ್ನು ಒದಗಿಸಿ – ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ಮನವಿ ಸಲ್ಲಿಸಿದ ಹೊಸನಗರದ ವಿದ್ಯಾರ್ಥಿನಿಯರು
ಶಿವಮೊಗ್ಗ: ಕನ್ನಡ ಶಿಕ್ಷಕರನ್ನು ಒದಗಿಸಿ ಎಂದು ಆಗ್ರಹಿಸಿ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಹೊಸನಗರದಿಂದ ಬಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಘಟನೆ ಗುರುವಾರ ಇಲ್ಲಿ ನಡೆದಿದೆ.
ಹೊಸನಗರದ ಜೂನಿಯರ್ ಕಾಲೇಜಿನ ಪ್ರೌಢಶಾಲೆ ವಿಭಾಗದ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಭೇಟಿಯಾಗಿ ಮನವಿ ಸಲ್ಲಿಸಿದರು.
ಕನ್ನಡ, ಇಂಗ್ಲೀಷ್ ಬರೆಯಲು ಬಾರದ ಉರ್ದು ಶಿಕ್ಷಕರಿಂದ ಕನ್ನಡ ಪಾಠ ಮಾಡಿಸಲು ಮುಂದಾಗಿರುವ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಯಲ್ಲಿ ೩೬೫ ವಿದ್ಯಾರ್ಥಿಗಳು ಇದ್ದೇವೆ. ಇಬ್ಬರು ಕನ್ನಡ ಶಿಕ್ಷಕರು, ಒಬ್ಬರು ಉರ್ದು ಶಿಕ್ಷಕರಿದ್ದಾರೆ. ಹೆಚ್ಚುವರಿ ಹುದ್ದೆ ಎಂದು ಒಬ್ಬ ಕನ್ನಡ ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಉರ್ದು ಶಿಕ್ಷಕರಿಂದಲೇ ಕನ್ನಡ ಮತ್ತು ಇಂಗ್ಲೀಸ್ ಮಾಧ್ಯಮಕ್ಕೆ ಪಾಠ ಮಾಡಿಸಲು ಯೋಜಿಸಲಾಗಿದೆ. ಉರ್ದು ಶಿಕ್ಷಕರಿಗೆ ಕನ್ನಡ ಮತ್ತು ಇಂಗ್ಲೀಷ್ ಬರುವುದಿಲ್ಲ. ಇದರಿಂದ ನಮಗೆ ಸಮಸ್ಯೆಯಾಗಲಿದೆ ಎಂದು ವಿದ್ಯಾರ್ಥಿಗಳು ಮನವಿಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಮನವಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಈ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಜೊತೆಗೆ ಚರ್ಚೆ ನಡೆಸಲಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತದೆ. ಅವರಿಗೆ ಯಾವೆಲ್ಲ ಸಹಾಯ ಮಾಡಲು ಸಾಧ್ಯವಿದೆಯೊ ಎಲ್ಲವನ್ನು ಮಾಡಲಿದ್ದೇವೆ ಎಂದರು