ಆಗುಂಬೆ ಕಾಳಿಂಗ ಸರ್ಪ ಸಂಶೋಧನಾ ಕೇಂದ್ರದಲ್ಲಿ ಅಕ್ರಮ? – ತನಿಖೆಗೆ ಸಚಿವರ ಆದೇಶ
ತೀರ್ಥಹಳ್ಳಿ ತಾಲೂಕಿನ ಆಗುಂಬೆಯ ಕಾಳಿಂಗ ಸರ್ಪ (King Cobra) ಸಂಶೋಧನಾ ಕೇಂದ್ರದಲ್ಲಿನ ಅಕ್ರಮ ಚಟುವಟಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ಆದೇಶ ನೀಡಿದ್ದಾರೆ. ಜನ ಸಂಗ್ರಾಮ ಪರಿಷತ್‌ನ ದೂರು ಸ್ವೀಕರಿಸಿದ ಸಚಿವರು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ತಂಡಕ್ಕೆ 10 ದಿನಗಳಲ್ಲಿ ವರದಿ ಸಲ್ಲಿಸಲು ಸೂಚಿಸಿದ್ದಾರೆ.
ಜನ ಸಂಗ್ರಾಮ ಪರಿಷತ್ ಅಧ್ಯಕ್ಷ ಅಖಿಲೇಶ್ ಚಿಪ್ಲಿ ಅವರು, ಕಾಳಿಂಗ ಸರ್ಪ ಸಂಶೋಧನೆ ಹೆಸರಿನಲ್ಲಿ ಆಗುಂಬೆ ಮಳೆಕಾಡು ಸಂಶೋಧನಾ ಕೇಂದ್ರ (ಎಆರ್‌ಆರ್‌ಎಸ್) ಅಕ್ರಮ, ಕಾನೂನು ಉಲ್ಲಂಘನೆ ಹಾಗೂ ವಂಚನೆ ನಡೆಸುತ್ತಿದೆ ಎಂದು ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ಕೇಂದ್ರದಲ್ಲಿನ ಎಲ್ಲಾ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಿದ್ದಾರೆ.
ಆರೋಪ ಪ್ರಕಾರ, ಸೋಮೇಶ್ವರ ಅಭಯಾರಣ್ಯದ ಕೇಂದ್ರ ಭಾಗದಲ್ಲಿರುವ ತಲ್ಲೂರು ಗ್ರಾಮದ ಸರ್ವೆ ನಂ.11ರಲ್ಲಿ ಎಆರ್‌ಆರ್‌ಎಸ್ ಅಕ್ರಮವಾಗಿ ಜಮೀನು ಖರೀದಿ ಮಾಡಿ ಕಟ್ಟಡ ನಿರ್ಮಾಣ ಮಾಡಿದೆ. ಸಂಶೋಧನೆಗೆ ಸಿಗುವ ಅವಧಿಯನ್ನು ಮೀರಿ ವರ್ಷವಿಡೀ ಛಾಯಾಗ್ರಹಣ ನಡೆಯುತ್ತಿದೆ. ಕಾಳಿಂಗ ಸರ್ಪಗಳ ಸೆರೆ, ರಕ್ಷಣೆ ಹೆಸರಲ್ಲಿ ಪರಿಶಿಷ್ಟರ ಮೇಲೆ ಶೋಷಣೆ ನಡೆಯುತ್ತಿದೆ ಎನ್ನಲಾಗಿದೆ.
ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅರಣ್ಯ ಭೂಮಿ ಒತ್ತುವರಿ, ಅಭಯಾರಣ್ಯದೊಳಗೆ ವಾಣಿಜ್ಯ ಚಟುವಟಿಕೆ, ಪರಿಸರ ಸೂಕ್ಷ್ಮ ಪ್ರದೇಶದ ಭೂಮಿ ಖರೀದಿ – ಇವೆಲ್ಲ ಅರಣ್ಯ ಮತ್ತು ವನ್ಯಜೀವಿ ಕಾಯಿದೆಗಳ ನೇರ ಉಲ್ಲಂಘನೆ ಎಂದೂ ದೂರು ಉಲ್ಲೇಖಿಸಿದೆ.
ಇತ್ತೀಚೆಗಷ್ಟೇ ಕೊಡಗು ಸಮೀಪದಲ್ಲಿ ಮಹಾರಾಷ್ಟ್ರದ ಮೂವರು ಅಕ್ರಮವಾಗಿ ಕಾಳಿಂಗ ಸರ್ಪ ಹಿಡಿದು ಛಾಯಾಗ್ರಹಣ ಮಾಡುತ್ತಿದ್ದ ಪ್ರಕರಣ ದಾಖಲಾಗಿತ್ತು. ಇದೇ ಹಾದಿಯಲ್ಲಿ, ಆಗುಂಬೆಯ ಎಆರ್‌ಆರ್‌ಎಸ್ ಸಿಬ್ಬಂದಿ ಕಾಳಿಂಗ ಸರ್ಪ ಮತ್ತು ಮರಿಗಳನ್ನು ಅಕ್ರಮವಾಗಿ ತಮ್ಮ ಜಾಗದಲ್ಲಿ ಇಟ್ಟು, ವನ್ಯಜೀವಿ ಛಾಯಾಗ್ರಾಹಕರಿಗೆ ಫೋಟೋ ಹಾಗೂ ವಿಡಿಯೋ ಶೂಟ್ ವ್ಯವಸ್ಥೆ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.