Headlines

ಬದುಕು ಕಟ್ಟಿಕೊಳ್ಳಲು ಶಿಕ್ಷಣ ಅಗತ್ಯ ; ಆನಂದಪುರ ಶ್ರೀ

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು – ಶಾಸಕ ಬೇಳೂರು ಗೋಪಾಲಕೃಷ್ಣ

ರಿಪ್ಪನ್‌ಪೇಟೆ ; ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಕೀಳರಿಮೆ ಇರಬಾರದು. ಈ ಹಿಂದೆ ಅಮೇರಿಕಾ ದೇಶದಿಂದ ಗೋಧಿಯನ್ನು ಆಮದು ಮಾಡಿಕೊಂಡು ಶಾಲಾ ಮಕ್ಕಳಿಗೆ ಗೋಧಿ ಉಪ್ಪಿಟ್ಟು ನೀಡುವ ಕಾಲವೊಂದಿತ್ತು ಅಷ್ಟು ಬಡತನದ ದೇಶವಾಗಿದ್ದ ಭಾರತ ಮುಂದುವರೆದಂತೆ ನಮ್ಮ ದೇಶದಲ್ಲಿ ಕೃಷಿಗೆ ಹೆಚ್ಚು ಒತ್ತು ನೀಡುವ ಮೂಲಕ ಆಹಾರದ ಕೊರತೆಯನ್ನು ದೂರ ಮಾಡಿ ವಿದೇಶಕ್ಕೆ ರಫ್ತು ಮಾಡುವಲ್ಲಿ ಭಾರತ ದೇಶ ಮೊದಲ ಸ್ಥಾನದಲ್ಲಿದೆ ಎಂದು ಆನಂದಪುರ ಮುರುಘಾರಾಜೇಂದ್ರ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ರಿಪ್ಪನ್‌ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ 2025-26ನೇ ಸಾಲಿನ ಸಾಂಸ್ಕೃತಿಕ ಕ್ರೀಡಾ ಎನ್.ಎಸ್.ಎಸ್.ಯು ರೆಡ್‌ಕ್ರಾಸ್, ರೆಡ್‌ರಿಬ್ಬನ್ ರೋವರ್ಸ್ ಮತ್ತು ರೇಂಜರ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಉದ್ಯೋಗಕ್ಕೆ ವ್ಯಾಸಂಗ ಮಾಡದೆ ಜ್ಞಾನಕ್ಕಾಗಿ ವ್ಯಾಸಂಗ ಮಾಡುವುದು ಇಂದಿನ ಅಗತ್ಯವಾಗಿದೆ. ಬದುಕಿಗಾಗಿ ಶಿಕ್ಷಣವನ್ನು ಪಡೆಯಿರಿ ಎಂದು ಹೇಳಿ, ಕೃಷಿ ಶಾಶ್ವತ ಕಾಯಕವೆಂದ ಅವರು ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ ಅದನ್ನು ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಸದಾ ವ್ಯಾಸಂಗದೊಂದಿಗೆ ಪಠ್ಯಪಠ್ಯೇತರ ಚಟುವಟಿಕೆ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ವಿದ್ಯಾರ್ಥಿಗಳಾಗಿ ರೂಪುಗೊಳ್ಳುವಂತಾಗ ಬೇಕು ಎಂದರು.

ಸಮಾರಂಭವನ್ನು ಶಾಸಕ, ರಾಜ್ಯ ಅರಣ್ಯ ಕೈಗಾರಿಕಾಭಿವೃದ್ದಿ ನಿಗದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ನಾಯಕರಾಗಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಕಾಲೇಜ್‌ನ ಮೂಲಭೂತ ಸೌಲಭ್ಯಗಳಿಗೆ ಸರ್ಕಾರದಿಂದ ವಿಶೇಷ ಅರ್ಥಿಕ ನೆರವು ಕಲ್ಪಿಸಲಾಗಿದೆ ಮತ್ತು ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶದ ಆಹಾರವನ್ನು ನೀಡುವ ಉದ್ದೇಶದಿಂದ ಹೆಚ್ಚವರಿಯಾಗಿ ಒಂದು ಸಾವಿರ ಹಣವನ್ನು ಹೆಚ್ಚಿಸಲಾಗಿದೆ ಎಂದರು.

ನಾವುಗಳು ಚಿಕ್ಕವರಿದ್ದಾಗ ತುತ್ತು ಅನ್ನಕ್ಕೂ ಪರದಾಡುವಂತಹ ಕಷ್ಟದ ಸ್ಥಿತಿ ಇತ್ತು ಆಗ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಗೋಧಿ ರವೆ ಉಪ್ಪಿಟ್ಟು ಕೊಡುತ್ತಿದ್ದರೂ ಆಗ ನಾವು ಉಪ್ಪಿಟ್ಟು ತಿಂದು ಶಿಕ್ಷಕರಿಂದ ಬಡಿತ ತಿಂದು ವ್ಯಾಸಂಗ ಮಾಡಿದ ನೆನಪಿದೆ ಎಂದರು.

ಇದೇ ಸಂದರ್ಭದಲ್ಲಿ ಕಾಲೇಜ್ ಆವರಣದಲ್ಲಿ ಜೇನುಗೋಡು ಸಭಾಂಗಣದ ನಾಮಫಲಕವನ್ನು ಉದ್ಘಾಟಿಸಲಾಯಿತು ಮತ್ತು ಪ್ರಾಚಾರ್ಯ ಪ್ರೋ. ಹೆಚ್.ಎಸ್. ವಿರೂಪಾಕ್ಷಪ್ಪ ಬರೆದ  ಕೃಷಿ ಸಂರಕ್ಷಣೆ ಮರು ಓದು’’ ಪುಸ್ತಕವನ್ನು ಶ್ರೀಗಳು ಲೋಕಾರ್ಪಣೆ ಮಾಡಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಚಾರ್ಯ ಪ್ರೋ.ಹೆಚ್.ಎಸ್.ವಿರೂಪಾಕ್ಷಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯಅತಿಥಿಗಳಾಗಿ ಗ್ರಾಮ ಪಂಚಾಯಿತ್ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ಸಿಡಿಸಿ ಸದಸ್ಯರಾದ ಮಂಜುನಾಥ ಕಾಮತ್, ಪಿಯೂಸ್ ರೋಡ್ರಿಗಸ್, ಹರ್ಷ, ಶ್ರೀನಿವಾಸ ಆಚಾರ್, ವಿಜೇಂದ್ರ ಪುಟ್ಟಸ್ವಾಮಿ, ರಘು ಕೆಂಚನಾಲ, ಕೆಡಿಪಿ ಸದಸ್ಯ ಆಸಿಫ್‌ಭಾಷಾ, ಗ್ರಾಮ ಪಂಚಾಯಿತ್ ಸದಸ್ಯರಾದ ಎನ್.ಚಂದ್ರೇಶ್, ನಿರೂಪ್ ಕುಮಾರ್, ಮುಖಂಡ ರವೀಂದ್ರ ಕೆರೆಹಳ್ಳಿ, ಉಪನ್ಯಾಸಕರಾದ ಕುಮಾರ ಎನ್. ರುದ್ರಮುನಿ, ವಿದ್ಯಾರ್ಥಿ ಪ್ರತಿನಿಧಿ ಕು. ಮಾನ್ಯಶ್ರೀ, ಕು. ನಂದನ್ ಜಿ, ಕಾಲೇಜ್ ಉಪನ್ಯಾಸಕ ವೃಂದ ಸಿಬ್ಬಂದಿ ವರ್ಗ ಹಾಜರಿದ್ದರು.

ವಿದ್ಯಾರ್ಥಿನಿ ಕು. ನಂದನ್ ಪ್ರಾರ್ಥಿಸಿದರು. ಉಪನ್ಯಾಸಕ ಡಾ.ಎಂ.ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಡಾ.ಸೌಮ್ಯ ನಿರೂಪಿಸಿದರು. ಹೆಚ್.ಎಂ.ಸಂಜಯ್‌ಕುಮಾರ್ ವಂದಿಸಿದರು.