HUMCHA | ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ 12 ಸದಸ್ಯರು ಅವಿರೋಧ ಆಯ್ಕೆ
ಹುಂಚ : ಸದಾ ಒಂದಿಲ್ಲೊಂದು ವಿವಾದಗಳಿಂದ ಹೊಸನಗರ ತಾಲ್ಲೂಕಿನ ಬಹು ವಿವಾದಿತ ಸೊಸೈಟಿ ಎಂಬ ಹೆಸರಾಗಿರುವ ಹುಂಚಾ ವ್ಯವಸಾಯ ಸಹಕಾರ ನಿಯಮಿತದ ಚುನಾವಣೆಯಲ್ಲಿ ಎಲ್ಲಾ 12 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಂಚ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಸ್ಪರ್ಧೆ ನಡೆಯದೆ, 12 ಸ್ಥಾನಗಳಿಗೆ ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ಐದು ವರ್ಷಗಳ ಅವಧಿಗೆ ಆಯ್ಕೆಯಾಗಬೇಕಿದ್ದ ಈ ಚುನಾವಣೆಗೆ ಸೆಪ್ಟೆಂಬರ್ 7ರಂದು ಮತದಾನ ನಡೆಯಬೇಕಿತ್ತು. ಆದರೆ ನಾಮಪತ್ರ ಹಿಂಪಡೆಯುವ ಅಂತಿಮ ದಿನವಾದ ಸೆಪ್ಟೆಂಬರ್ 1ರ ವೇಳೆಗೆ ಅಗತ್ಯಕ್ಕಿಂತ ಹೆಚ್ಚು ಸ್ಪರ್ಧಾರ್ಥಿಗಳು ಕಣದಲ್ಲಿರದ ಕಾರಣ, ಚುನಾವಣಾಧಿಕಾರಿಗಳು ಸೋಮವಾರವೇ ಫಲಿತಾಂಶವನ್ನು ಘೋಷಿಸಿದರು.
ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಮಹಿಳಾ ಹಾಗೂ ಸಾಮಾನ್ಯ ಕ್ಷೇತ್ರಗಳನ್ನು ಒಳಗೊಂಡಂತೆ 12 ಸ್ಥಾನಗಳಿಗೆ ಕೆ.ಟಿ. ಕುಮಾರ, ಎಚ್.ಎಸ್. ಗಿರೀಶ್, ಎಚ್.ಎನ್. ಮಂಜುನಾಥ್, ಕೆ.ಆರ್. ಸಂಜಯ್, ಎಸ್. ರಾಜಮೂರ್ತಿ, ನರೇಂದ್ರ ನಾಯಕ, ಎನ್.ಸಿ. ಕೇಶವಮೂರ್ತಿ, ಯೋಮಕೇಶಪ್ಪ, ಚಂದ್ರಮ್ಮ, ರೇವತಿ ಹಾಗೂ ಜಿ.ಎನ್. ರಾಘವೇಂದ್ರ ನಾಯಕ್ ಅವಿರೋಧವಾಗಿ ಆಯ್ಕೆಯಾದರು.
ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಎಂ.ಎಂ. ಪರಮೇಶ್‌ರ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಹೊಂದಾಣಿಕೆಯ ಪರಿಣಾಮವಾಗಿ 9 ಸ್ಥಾನಗಳನ್ನು ಕಾಂಗ್ರೆಸ್ ಹಾಗೂ 3 ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಪಡೆದುಕೊಂಡಿದ್ದಾರೆ.