ಕೊಡಚಾದ್ರಿ ಬೆಟ್ಟಕ್ಕೆ ತೆರಳುತಿದ್ದ ಪ್ರವಾಸಿಗರಿದ್ದ ಜೀಪ್ ಪಲ್ಟಿ
ಕೊಲ್ಲೂರಿನಿಂದ ಕೊಡಚಾದ್ರಿಗೆ ಬೆಟ್ಟಕ್ಕೆ ತೆರಳುತಿದ್ದ ಪ್ರವಾಸಿಗರಿದ್ದ ಜೀಪ್ ಪಲ್ಟಿಯಾಗಿರುವ ಘಟನೆ ನಿಟ್ಟೂರು – ಕಟ್ಟಿನಹೊಳೆ ಮಾರ್ಗದ ಕುಂಬಳೆ ಬಳಿ ನಡೆದಿದೆ.
ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಕೇರಳ ಮೂಲದ ಎಂಟು ಜನ ಪ್ರವಾಸಿಗರಿದ್ದ ಜೀಪ್ ಕುಂಬಳೆ ಬಳಿ ಪಲ್ಟಿಯಾಗಿದೆ.ಘಟನೆಯಲ್ಲಿ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕೊಲ್ಲೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ..
ಕೊಡಚಾದ್ರಿ ಜೀಪ್ ಚಾಲಕರ ಉದ್ದಟತನಕ್ಕೆ ಬೀಳಬೇಕಿದೆ ಪೊಲೀಸರ ಅಂಕುಶ
ಕೊಲ್ಲೂರು ಹಾಗೂ ನಿಟ್ಟೂರು ಪ್ರದೇಶಗಳಿಂದ ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸ ಕೈಗೊಳ್ಳುವವರಿಗೆ ಜೀಪ್ ಬಾಡಿಗೆ ತೆಗೆದುಕೊಳ್ಳುವುದು ಅನಿವಾರ್ಯ. ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಜೀಪ್‌ಗಳು ಸಂಚರಿಸುತ್ತಿವೆ.
ಆದರೆ, ಕೆಲವು ಜೀಪ್ ಚಾಲಕರ ವರ್ತನೆ ಪ್ರವಾಸಿಗರ ಸುರಕ್ಷತೆಗೆ ಗಂಭೀರ ಬೆದರಿಕೆಯಾಗಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಕರ್ತವ್ಯದ ವೇಳೆ ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ವಾಹನ ಪರವಾನಗಿ ಇಲ್ಲದೆ ಚಾಲನೆ ಮಾಡುವುದು, ಇನ್ಶುರೆನ್ಸ್ ಮತ್ತು ಫಿಟ್ನೆಸ್ ಅವಧಿ ಮುಗಿದ ವಾಹನಗಳನ್ನು ರಸ್ತೆಗಿಳಿಸುವುದು — ಇವು ಪ್ರವಾಸಿಗರ ಜೀವಕ್ಕೆ ಅಪಾಯ ತಂದೊಡ್ಡುವ ಅಂಶಗಳಾಗಿವೆ. ಕೊಡಚಾದ್ರಿ ಬೆಟ್ಟದಂತಹ ದುರ್ಗಮ ಹಾದಿಯಲ್ಲಿ ಯಾವುದೇ ಅಪಘಾತ ಸಂಭವಿಸಿದರೆ ಹೊಣೆ ಯಾರು ಎಂಬ ಪ್ರಶ್ನೆ ಪ್ರವಾಸಿಗರ ಮನದಲ್ಲಿ ಮೂಡಿದೆ.
ಇದೇ ಅಲ್ಲದೆ, ‘ರಿಪಬ್ಲಿಕ್ ಆಫ್ ಕೊಡಚಾದ್ರಿ’ ಎಂದು ತಮ್ಮನ್ನು ತಾವೇ ಘೋಷಿಸಿಕೊಂಡಂತೆ ವರ್ತಿಸುವ ಕೆಲ ಚಾಲಕರು ಮತ್ತು ಮಾಲೀಕರು ಪ್ರವಾಸಿಗರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದೂ, ಬೇಕಾಬಿಟ್ಟಿ ಹಣ ವಸೂಲಿ ಮಾಡುವುದೂ ಮಾಮೂಲಿ ಸಂಗತಿಯಾಗಿದೆ.
ಇನ್ನೂ ಶುಕ್ರವಾರ ನಿಟ್ಟೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಜೀಪ್ ಚಾಲಕರು ಹಾಗೂ ಮಾಲೀಕರ ಕಾರ್ಯವೈಖರಿಯ ಬಗ್ಗೆ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಕೂಡ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ತುರ್ತು ಕ್ರಮ ಕೈಗೊಂಡು, ಎಲ್ಲಾ ಜೀಪ್‌ಗಳ ದಾಖಲೆಗಳನ್ನು ಪರಿಶೀಲಿಸಿ, ಪೊಲೀಸರ ವತಿಯಿಂದ ಪ್ರದರ್ಶನ ಕಾರ್ಡ್‌ಗಳನ್ನು ವಿತರಿಸುವ ಮೂಲಕ, ಭವಿಷ್ಯದಲ್ಲಿ ಸಂಭವಿಸಬಹುದಾದ ಭಾರಿ ಅನಾಹುತವನ್ನು ತಪ್ಪಿಸಲು ಕ್ರಮವಹಿಸುವ ಅಗತ್ಯವಿದೆ.