Headlines

ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ; ಪಿಎಸ್‌ಐ ರಾಜುರೆಡ್ಡಿ

ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕಿದೆ; ಪಿಎಸ್‌ಐ ರಾಜುರೆಡ್ಡಿ

ರಿಪ್ಪನ್‌ಪೇಟೆ : ಪ್ರತಿಯೊಬ್ಬರು ರಕ್ತದಾನದ ಮಹತ್ವ ಅರಿಯಬೇಕು,ರಕ್ತದ ಅಗತ್ಯತೆ ಮನಗಾಣುವ ಮೂಲಕ ಯುವ ಜನತೆ ರಕ್ತದಾನದಂತಹ ಮಹತ್ಕಾರ್ಯಕ್ಕೆ ಹೆಚ್ಚು ಹೆಚ್ಚು ಕೈ ಜೋಡಿಸಬೇಕು ಎಂದು ರಿಪ್ಪನ್‌ಪೇಟೆ ಪೊಲೀಸ್ ಠಾಣಾಧಿಕಾರಿ ರಾಜುರೆಡ್ಡಿ ಹೇಳಿದರು.

ಜಿಲ್ಲಾ ಮೆಗ್ಗಾನ್ ಸರಕಾರಿ ಆಸ್ಪತ್ರೆ, ಪೊಲೀಸ್ ಇಲಾಖೆ , ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ರಿಪ್ಪನ್‌ಪೇಟೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿ ರಕ್ತದಾನ ಮಾಡುವ ಮೂಲಕ ವ್ಯಕ್ತಿ ಸಂಭವನೀಯ ಹೃದಯಾಘಾತ, ರಕ್ತದೊತ್ತಡ, ಲಿವರ್ ಸಮಸ್ಯೆ ಸೇರಿದಂತೆ ಹಲವು ಬಗೆಗೆ ರೋಗಗಳಿಂದ ಮುಕ್ತನಾಗಲು ಸಾಧ್ಯವಿದ್ದು, ಇದಕ್ಕೆ ನಿರಂತರ ರಕ್ತದಾನವೇ ತಕ್ಕ ಉತ್ತರವಾಗಿದೆ ಎಂದರು.

ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರ್ ಬಾಬು ಮಾತನಾಡಿ ಯಾವುದೇ ಅಪಘಾತ, ಅನಾಹುತದಂತಹ ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ರಕ್ತದ ಅಗತ್ಯತೆ ಅನಿವಾರ್ಯವಾಗಿದೆ. ಓರ್ವ ಆರೋಗ್ಯವಂತ ಮನುಷ್ಯ ವರ್ಷದಲ್ಲಿ ಕನಿಷ್ಟ ಎರಡು ಬಾರಿ ರಕ್ತದಾನ ಮಾಡಬಹುದು. ಇದರಿಂದ ಜೀವ ಉಳಿಸಿದ ಸಾರ್ಥಕ ಭಾವ ಹೊಂದಬಹುದು. ಯುವಸಮೂಹ ರಕ್ತದಾನ ಕುರಿತು ಯಾವ ಹಿಂಜರಿಕೆ ಹೊಂದದೆ ರಕ್ತದಾನಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

47 ಬಾರಿ ರಕ್ತದಾನ ಮಾಡಿರುವ, ಪರಿಸರಾಸಕ್ತ ಹೆಡ್ ಕಾನ್‌ಸ್ಟೇಬಲ್ ಹಾಲೇಶಪ್ಪ ಮಾತನಾಡಿ, ಪೊಲೀಸರ ಆರೋಗ್ಯ ಸುಸ್ಥಿತಿ ಕಾಯ್ದುಕೊಳ್ಳುವ ಮೂಲಕ ಸಮಾಜದ ಅಗತ್ಯತೆಯನ್ನು ಪೂರೈಸುವುದು ಈ ಶಿಬಿರದ ಮೂಲ ಉದ್ದೇಶವಾಗಿದ್ದು, ಇಲಾಖೆಯ ಮೇಲಾಧಿಕಾರಿಗಳ ಸಂಪೂರ್ಣ ಬೆಂಬಲ ಈ ಕಾರ್ಯಕ್ರಮಕ್ಕಿದೆ ಎಂದರು.

ಈ ಸಂಧರ್ಭದಲ್ಲಿ ಪ್ರಮುಖರಾದ ಆನಂದ್ ಮೆಣಸೆ , ಉಬೇದುಲ್ಲಾ ಷರೀಪ್ , ರಾಘವೇಂದ್ರ , ಶೀಲಾ ಆರ್ ಡಿ , ಮಹಮ್ಮದ್ ಹುಸೇನ್ , ಶ್ರೀಧರ್ ಚಿಗುರು , ಪ್ರಶಾಂತ್ ತಳಲೆ , ಲೇಖನಾ , ಶ್ವೇತಾ ಆಚಾರ್ಯ , ಸಾಜೀದಾ , ಧನಲಕ್ಷ್ಮಿ ಹಾಗೂ ಇನ್ನಿತರರಿದ್ದರು.

ಒಟ್ಟಾರೆ 47 ಯೂನಿಟ್ ರಕ್ತ ಸಂಗ್ರಹವಾಯಿತು. ತೀರ್ಥಹಳ್ಳಿ ಡಿವೈಎಸ್‌ಪಿ ಅರವಿಂದ್ ಕಲಗುಜ್ಜಿ ಸಿಪಿಐ ಗುರಣ್ಣ ಹೆಬ್ಬಾಳ್ ಅವರ ಮಾರ್ಗದರ್ಶನ, ಪಿಎಸ್‌ಐ ರಾಜುರೆಡ್ಡಿ ನೇತೃತ್ವ ಹಾಗೂ ಹೆಡ್‌ ಕಾನ್ಸ್ ಟೇಬಲ್ ಹಾಲೇಶಪ್ಪ ಅವರ ಮುಂದಾಳತ್ವದಲ್ಲಿ ಈ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪೂರ್ಣಗೊಂಡಿತು.