ರೈಲಿಗೆ ಸಿಲುಕಿ ರಿಪ್ಪನ್ ಪೇಟೆಯ ಯುವಕ ಸಾವು ಪ್ರಕರಣ – ಸಾವಿನ ಸುತ್ತ ಅನುಮಾನದ ಹುತ್ತ…….!?.
ರಿಪ್ಪನ್ ಪೇಟೆ : ಸಮಾಜದೊಂದಿಗೆ ಬೆರೆತು ಬಾಳಿ ಬದುಕಬೇಕಾದ ಉತ್ಸಾಹಿ ಯುವಕ ರಾಮನಾಥ್ ಮಾರ್ಚ್ 25ರಂದು ಚನ್ನರಾಯಪಟ್ಟಣದ ಸಮೀಪ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಟ್ಟಿದ್ದಾನೆ ಎಂಬ ಪ್ರಕರಣ ತಿರುವು ಪಡೆದುಕೊಂಡಿದ್ದು ಕುಟುಂಬಸ್ಥರು ಇದು ಆತ್ಮಹತ್ಯೆಯಲ್ಲ ಕೊಲೆಯೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.
ಹೌದು ಮಾರ್ಚ್ 25 ಸೋಮವಾರ ರಾತ್ರಿ ಚೆನ್ನಪಟ್ಟಣ ಮದ್ದೂರು ಮಾರ್ಗ ಮಧ್ಯೆಯ ನಿಡಗುಂಟಿ ಗ್ರಾಮದ ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ರಾಮ್ ನಾಥ್ ಶವ ಪತ್ತೆಯಾಗಿದೆ ಎಂಬ ಆಘಾತಕಾರಿ ಸುದ್ದಿ ಪಟ್ಟಣದ ಜನತೆಗೆ ಬರಸಿಡಿಲಿನಂತೆ ಬಂದೆರಗಿತ್ತು.
ರಿಪ್ಪನ್ ಪೇಟೆ ತೀರ್ಥಹಳ್ಳಿ ರಸ್ತೆಯ ಸಾಯಿನಾಥ್ ಭಂಡಾರಿಯವರ ಪುತ್ರನಾದ ರಾಮ್ ನಾಥ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಯಾವುದೇ ದುಶ್ಚಟಗಳಿಲ್ಲದೆ ತನ್ನ ಪಾಡಿಗೆ ತಾನು ಉದ್ಯೋಗ ಮಾಡಿಕೊಂಡು ತನ್ನ ಬದುಕನ್ನು ಕಟ್ಟಿಕೊಂಡಿದ್ದ, ಜೀವನದ ಬಗ್ಗೆ ಹಲವು ಕನಸನ್ನು ಕಂಡಿದ್ದ ಉತ್ಸಾಹಿ ಯುವಕ ರಾಮನಾಥ್ ಮಾರ್ಚ್ 25ರಂದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುದ್ದಿ ಕುಟುಂಬ ವರ್ಗದವರಿಗೆ ಹಾಗೂ ರಿಪ್ಪನ್ ಪೇಟೆಯ ಜನತೆಗೆ ಅಘಾತರಿ ಸುದ್ದಿಯಾಗಿತ್ತು.ನಂತರ ಘಟನಾ ಸ್ಥಳಕ್ಕೆ ಕುಟುಂಬ ವರ್ಗದವರು ಹಾಗೂ ಸಂಬಂಧಪಟ್ಟ ಪರಿಶೀಲನೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಶಂಕೆಗೆ ಈಡು ಮಾಡಿದೆ ಎಂದು ರಾಮನಾಥ್ ಕುಟುಂಬದ ಮೂಲಗಳು ತಿಳಿಸಿವೆ.
ನಿಲ್ದಾಣದ ಮುಂಭಾಗದಲ್ಲಿ ತನ್ನ ಬೈಕ್ ನಿಲ್ಲಿಸಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಿಡಗುಂಟಿ ರೈಲ್ವೆ ನಿಲ್ದಾಣದ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ ಆದರೆ ಜೀವಂತವಾಗಿರುವ ವ್ಯಕ್ತಿ ಚಲಿಸುತ್ತಿರುವ ರೈಲಿಗೆ ತಲೆ ಕೊಟ್ಟರೆ ರುಂಡ ಮತ್ತು ದೇಹದ ಭಾಗ ರೈಲಿನ ವೇಗಕ್ಕೆ ಘಟನಾ ಸ್ಥಳದಿಂದ ತುಂಬಾ ದೂರ ಚೆಲ್ಲಾಪಿಲ್ಲಿಯಾಗಿ ಬೀಳಬೇಕಿತ್ತು ಆದರೆ ರಾಮನಾಥ್ ಪ್ರಕರಣದಲ್ಲಿ ದೇಹದ ಎರಡು ಭಾಗಗಳು ಘಟನೆ ನಡೆದ ಸ್ಥಳದಲ್ಲಿ ಮಲಗಿಸಿಟ್ಟ ಹಾಗೇ ಇದೆ ಹಾಗೂ ಆತನ ಬಲಗೈನಲ್ಲಿದ್ದ ಮೊಬೈಲ್ ಗೂ ಕೂಡ ಯಾವುದೇ ಹಾನಿಯಾಗಿಲ್ಲ ಇದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.
ಈ ಘಟನೆ ನಡೆದ ನಿಡಗುಂಟ ನಿಲ್ದಾಣದಲ್ಲಿ ಯಾವುದೇ ಸಿಸಿ ಟಿವಿ ಕ್ಯಾಮೆರಾ ಗಳಿಲ್ಲದೇ ಇರುವುದು ಶಂಕೆಗೆ ಮತ್ತಷ್ಟು ಪುಷ್ಠಿ ನೀಡುತ್ತಿದೆ.ಇನ್ನೂ ರಾಮನಾಥ್ ಮೊಬೈಲ್ ನಲ್ಲಿದ್ದ ಕಾಲ್ ಡಿಟೈಲ್ಸ್ ಎಲ್ಲಾ ಡೆಲಿಟ್ ಆಗಿದೆ ಇನ್ನೂ ರಾಮನಾಥ್ ಕುಟುಂಬಸ್ಥರು ಹೇಳುವಂತೆ ಚನ್ನಪಟ್ಟಣ ಹಾಗೂ ಮದ್ದೂರು ಮಾರ್ಗದಲ್ಲಿ ಅವನು ಎಂದಿಗೂ ಸಂಚರಿಸುವುದಿಲ್ಲ ಒಂದು ವೇಳೆ ಊರಿಗೆ ಬರುವುದಾದರೆ ತುಮಕೂರು ಮಾರ್ಗವಾಗಿಯೇ ರಿಪ್ಪನ್ ಪೇಟೆ ಕಡೆಗೆ ಬರುತಿದ್ದ ಎಂದೂ ಹೋಗದ ಮಾರ್ಗದಲ್ಲಿ ಆತ ಯಾಕಾಗಿ ಹೋದ ಎನ್ನುವುದೇ ಸಂಶಯವಾಗಿದೆ.
ವಾರದ ಹಿಂದೆಯಷ್ಟೇ ಕುಟುಂಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಮನಾಥ್ ಆತರಹದ ಏನಾದರೂ ಸಮಸ್ಯೆಗಳಿದ್ದಲ್ಲಿ ಕುಟುಂಬಸ್ಥರೊಂದಿಗೆ ಹಂಚಿಕೊಳ್ಳುತಿದ್ದ , ಇನ್ನೂ ಆತ ಬೆಟ್ಟಿಂಗ್ ಆಡಿರಬೇಕು ಎಂದೂ ಕೆಲವರು ಮಾತನಾಡಿಕೊಳ್ಳುತಿದ್ದಾರೆ ಆದರೆ ಬೆಟ್ಟಿಂಗ್ ರಾಮನಾಥ್ ವಿರೋದಿಸುತಿದ್ದ ಚಲನಚಿತ್ರ ನಟನಾದ ಸುದೀಪ್ ಬೆಟ್ಟಿಂಗ್ ಜಾಹಿರಾತು ನೀಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮೂಲಕ ವಿರೋಧಿಸಿದ್ದ ಅದು ವೈರಲ್ ಕೂಡ ಆಗಿತ್ತು.
ಬಾಳಿ ಬದುಕಬೇಕಾಗಿದ್ದ ಹರೆಯದ ಯುವಕ ರಾಮ್ ನಾಥ್ ಏಕಾಏಕಿ ತನ್ನ ಬದುಕನ್ನು ಕೊನೆಗಾಣಿಸಲು ಸಾಧ್ಯವೇ ಇಲ್ಲ, ಆತನಿಗೆ ಯಾವುದೇ ಆರ್ಥಿಕ ಸಂಕಷ್ಟವಾಗಲಿ ಮತ್ತು ಆರೋಗ್ಯ ಸಮಸ್ಯೆಯಾಗಲಿ ಇರಲಿಲ್ಲ.ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಕುಟುಂಬದವರ ಅನುಮಾನಕ್ಕೆ ಎಡೆ ಮಾಡಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಲಂಕಷವಾಗಿ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿಲಿ ಎಂಬುದೇ ಪೋಸ್ಟ್ ಮ್ಯಾನ್ ಸುದ್ದಿ ಬಳಗದ ಆಶಯವಾಗಿದೆ.
ಪ್ರಪಂಚದಲ್ಲಿ ಯಾರೂ ಇಷ್ಟಪಡದ, ಮಾತಾಡಲೂ ಬಯಸದ ವಿಷಯ—ಸಾವು. ಆದರೆ ಇಂದಿಲ್ಲ ನಾಳೆ ನಾವೆಲ್ಲ ಅದನ್ನು ಎದುರಿಸಲೇಬೇಕು.ಅದೇ ವಾಸ್ತವ…
ಆತ್ಮೀಯರು ಸಾವಿನಿಂದ ನಮ್ಮನ್ನು ಅಗಲಿದಾಗ ಅದನ್ನು ಒಪ್ಪಿಕೊಳ್ಳುವುದು ಸುಲಭದ ವಿಷಯವಲ್ಲ. “ಸಾವು ಹೇಗೆ ಅಂದರೆ, ಯಾರೋ ಬಂದು ನಿಮ್ಮದೇ ಸ್ವಂತ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ತೆಗೆದುಕೊಂಡು ಹೋದ ಹಾಗೆ. ನಿಮ್ಮಿಂದ ಇನ್ನೂ ಯಾವತ್ತೂ ವಾಪಸ್ ನಿಮ್ಮದೇ ಮನೆಗೆ ಬರುವುದಕ್ಕೆ ಆಗುವುದಿಲ್ಲ. ನಿಮ್ಮ ಜೊತೆ ನೆನಪುಗಳು ಬಿಟ್ಟರೆ ಬೇರೇನೂ ಇರುವುದಿಲ್ಲ. ಒಪ್ಪಿಕೊಳ್ಳಲೇಬೇಕಾದ ಸತ್ಯ ಇದು. ಇದೆಂಥ ಅನ್ಯಾಯ ಎಂದು ನಿಮಗನಿಸಿದರೂ ನಿಮ್ಮಿಂದ ಏನೂ ಮಾಡಲಾಗುವುದಿಲ್ಲ..
ಆತ್ಮೀಯ ಮಿತ್ರ ಹಾಗೂ ನಲ್ಮೆಯ ಶಿಷ್ಯನಾಗಿದ್ದ ರಾಮ್ ನಾಥ್ ನ ದಾರುಣ ಅಂತ್ಯ ನಿಜವಾಗಿಯೂ ಸಹಿಸಲು ಸಾಧ್ಯವಿಲ್ಲದ ನೋವನ್ನು ತಂದಿದೆ.ನಾನು 2020 ರಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ಚಾನೆಲ್ ನ್ನು ಪ್ರಾರಂಭಿಸಿದಾಗ ನನ್ನನ್ನು ಪ್ರೋತ್ಸಾಹಿಸಿ ಹುರಿದುಂಬಿಸಿದ ಆ ಸುಂದರ ಕಂಗಳ ಸ್ಪುರದ್ರೂಪಿ ಯುವಕನ ದಾರುಣ ಅಂತ್ಯ ನಂಬಲು ಸಾಧ್ಯವಿಲ್ಲ ಒಟ್ಟಾರೆಯಾಗಿ ರಾಮನಾಥ್ ಸಾವಿಗೆ ನ್ಯಾಯ ಸಿಗಲೆಂದು ಆಶಿಸೋಣ…..
– ರಫ಼ಿ ರಿಪ್ಪನ್ ಪೇಟೆ