Breaking
12 Jan 2026, Mon

HOSANAGARA | ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿಗಳ‌ ಮಹಾಪೂರ |ಆಡಳಿತ ಸುಧಾರಣೆಗೆ ‘ಜನಸ್ಪಂದನ’ ಸಹಕಾರಿ ; ಸಚಿವ ಮಧು ಬಂಗಾರಪ್ಪ

HOSANAGARA | ಜನಸ್ಪಂದನ ಕಾರ್ಯಕ್ರಮದಲ್ಲಿ ಅರ್ಜಿಗಳ‌ ಮಹಾಪೂರ |ಆಡಳಿತ ಸುಧಾರಣೆಗೆ ‘ಜನಸ್ಪಂದನ’ ಸಹಕಾರಿ ; ಸಚಿವ ಮಧು ಬಂಗಾರಪ್ಪ

ಹೊಸನಗರ ; ಜನರ ಸಮಸ್ಯೆಗಳನ್ನು ಆಲಿಸಿ, ಶೀಘ್ರ ಪರಿಹಾರ ದೊರಕಿಸಲು ಮತ್ತು ಆಡಳಿತ ಸುಧಾರಣೆಯಲ್ಲಿ ‘ಜನಸ್ಪಂದನ’ ಕಾರ್ಯಕ್ರಮ ಬಹಳ‌ ಮುಖ್ಯ ಪಾತ್ರ ವಹಿಸುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ನಾಗರೀಕರ ಅಹವಾಲುಗಳನ್ನು ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸೋಮವಾರ ಇಲ್ಲಿನ ಈಡಿಗರ ಸಭಾ ಭವನದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ‘ಜನಸ್ಪಂದನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವುದರಿಂದ ಎಲ್ಲ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಇಲ್ಲಿ ಹಾಜರಾಗುವ ಕಾರಣ ಜನರ ಸಮಸ್ಯೆಗಳು ಅರ್ಥ ಆಗುತ್ತವೆ.‌ ಪರಹಾರಕ್ಕೆ ಅನೇಕ ಕಾನೂನು ಇದ್ದು, ಅವುಗಳನ್ನು ಅನ್ವಯಿಸಿ, ಸಾರ್ವಜನಿಕರಿಗೆ ಅನುಕೂಲ‌ ಮಾಡಲಾಗುವುದು. ಮುಂದಿನ ದಿನಗಳಲ್ಲಿ‌ ಎಲ್ಲ ತಾಲ್ಲೂಕುಗಳಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡಲಾಗುವುದು. ಮುಖ್ಯಮಂತ್ರಿಗಳು ಸಹ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಜನಸ್ಪಂದನ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುತ್ತಾರೆ.‌

ಆಡಳಿತ ಸುಧಾರಣೆಯಲ್ಲಿ‌ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಯಾವುದೇ ಸಮಸ್ಯೆಗಳಿದ್ದರೂ ಚರ್ಚಿಸಿ, ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.

ಕಾರ್ಯಕ್ರಮದಲ್ಲಿ ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತು ನೇರವಾಗಿ ಮಾತನಾಡಿ, ಇತ್ಯರ್ಥ ಪಡಿಸಲು ಇಡೀ ಜಿಲ್ಲಾ ಆಡಳಿತ ಯಂತ್ರವೇ ಇಂದು ಇಲ್ಲಿ ಹಾಜರಿದ್ದು, ಮುಕ್ತ ಚರ್ಚೆ ನಡೆಯಲಿ, ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಉತ್ತಮ‌ ಕಾರ್ಯಕ್ರಮವಾಗಲಿ ಎಂದರು.

ಚುನಾಯಿತ ಪ್ರತಿನಿಧಿಗಳು, ಪ.ಪಂ. ಅಧ್ಯಕ್ಷ ನಾಗಪ್ಪ, ಪ.ಪಂ ಉಪಾಧ್ಯಕ್ಷೆ ಚಂದ್ರಕಲಾ,ಗ್ಯಾರಂಟಿ ಯೋಜನೆಗಳ ತಾಲ್ಲೂಕು ಅಧ್ಯಕ್ಷ ಚಿದಂಬರ, ಕೆಡಿಪಿ ಸದಸ್ಯರು, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ‌ ಸಿದ್ಧಲಿಂಗ ರೆಡ್ಡಿ, ಜಿ.ಪಂ ಉಪ ಕಾರ್ಯದರ್ಶಿ ಜಯಲಕ್ಷ್ಮಿ, ಸಾಗರ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಮೋಹನ್ ಕುಮಾರ್, ಹೊಸನಗರ ಪ್ರಭಾರ ಎಸಿ ರಶ್ಮಿ, ಪ.ಪಂ, ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಹಾಜರಿದ್ದರು.

ಅರ್ಜಿಗಳ ಮಹಾಪೂರ: ಸಚಿವರಿಂದ ಸ್ವೀಕಾರ :

ಸೊರಬ ತಾಲ್ಲೂಕು ತಲಗಡ್ಡೆ ಗ್ರಾಮದ ಗಣಪತಿ ಬಿ ಇವರ ಜಮೀನಿಗೆ ಗಂಗಾ ಕಲ್ಯಾಣ ಯೋಜನೆಯಡಿ 2023 ರಲ್ಲೇ ಬೋರ್ ವೆಲ್ ಮಂಜೂರಾದರೂ ಇದುವರೆಗೆ ಬೋರ್ ಕೊರೆದಿಲ್ಲ, ಶೀಘ್ರದಲ್ಲೇ ಬೋರ್ ಕೊರೆಸಬೇಕೆಂದು ಅರ್ಜಿ ಸಲ್ಲಿಸಿದರು.

80 ವರ್ಷದ ಮಳವಳ್ಳಿ ಗ್ರಾಮದ ಪಾರ್ವತಮ್ಮ ಎಂಬುವವರನ್ನು 2021 ರಲ್ಲಿ‌ ಪಡಿತರ ಚೀಟಿಯಲ್ಲಿ ಮರಣ ಹೊಂದಿರುವುದಾಗಿ ನಮೂದಿಸಿ ಪಡಿತರ ಚೀಟಿ ರದ್ದುಪಡುಸಲಾಗಿದೆ. ತಾವು ಜೀವಂತವಾಗಿದ್ದು ವಂಚಿತರಾಗಿದ್ದ ಸೌಲಭ್ಯಗಳನ್ನು ನೀಡಬೇಕೆಂದು ಖುದ್ದು ಸಚಿವರಿಗೆ ಅರ್ಜಿ ಸಲ್ಲಿಸಿದರು. ಸಚಿವರು ಪ್ರತಿಕ್ರಿಯಿಸಿ, ಈ ಅಚಾತುರ್ಯವೆಸಗಿ ತೊಂದರೆಪಡಿಸಿದ ಅಧಿಕಾರಿ ವಿರುದ್ದ ಸೂಕ್ತ ಕ್ರಮ‌ ಕೈಗೊಳ್ಳುವಂತೆ ಸೂಚನೆ ನೀಡಿದರು.

ರಂಗನಾಥ್ ಅರ್ಜಿ ಸಲ್ಲಿಸಿ ಹೊಸನಗರದ 6ನೇ ವಾರ್ಡ್‌ನಲ್ಲಿ ಅಸಮರ್ಪಕ ವಿದ್ಯುತ್ ಸಂಪರ್ಕದಿಂದಾಗು ತುಂಬಾ ತೊಂದರೆಯಾಗುತ್ತಿದೆ. ರಿಪ್ಪನ್‌ಪೇಟೆಯಲ್ಲಿ ಎಕ್ಸ್‌ಪ್ರೆಸ್ ಲೈನ್ ಅಳವಡಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕೆಂದು ಮನವಿ ಮಾಡಿದರು.

ಮುಂಬಾರು ಗ್ರಾ.ಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರು‌ ಮತ್ತು ವಿದ್ಯುತ್ ಸಮಸ್ಯೆ ಹೆಚ್ಚಿದ್ದು ಬಗೆಹರಿಸುವಂತೆ ಮುಂಬಾರು ಗ್ರಾ.ಪಂ. ಅಧ್ಯಕ್ಷ ರು ಮನವಿ ಮಾಡಿದರು.

ಕೆರೆಕೊಪ್ಪ ಟೀಕಪ್ಪ ಯೋಗ ನಾಯಕ್, ಸ.ನಂ.79 ರಲ್ಲಿ ತಮ್ಮ ಅಜ್ಜನ ಕಾಲದಿಂದ ಜಾಗದ ಅನುಭೋಗದಲ್ಲಿದ್ದು, ಈ ಜಾಗವು ಗೋಮಾಳ ಅರಣ್ಯ ಭೂಮಿಯಾಗಿರುತ್ತದೆ. ಬಗರ್ ಹುಕುಂ ಅರ್ಜಿ ಸಲ್ಲಿಸಿದ್ದು, ಇಲ್ಲಿ ಜಂಟಿ ಸರ್ವೇ ನಡೆಸಿ ಜಾಗ ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದರು.

ನಂಜುವಳ್ಳಿ ಗ್ರಾಮದ ಶೇಖರಪ್ಪ , ಸ.ನಂ.4 ರಲ್ಲಿ 8 ಎಕರೆ ಜಾಗದ ಕುರಿತು ತಮ್ಮ ಕುಟುಂಬದ ಇಬ್ಬರ ಹೆಸರಲ್ಲಿ ಜಂಟಿ ಪಹಣಿ ಇದ್ದು, ಶರಾವತಿ ವಸತಿ ಸೌಲಭ್ಯ ಕಲ್ಪಿಸುವ ವೇಳೆ ಈ ಜಮೀನು ಅರಣ್ಯ ಭೂಮಿ ಎಂದು ನಮೂದಾಗಿರುತ್ತದೆ. ಡಿ ರಿಸರ್ವ್ ಮಾಡುವ ಪ್ರಸ್ತಾವನೆಯಲ್ಲಿ ತಮ್ಮ ಕುಟುಂಬ ಮತ್ತು ತಮ್ಮ ಊರಿನ ಹೆಸರು ಸೇರಿಸಬೇಕು ಮನವಿ‌ ಮಾಡಿದರು.
ಮಜರೆ ಬಾಳೆಹಳ್ಳದ ಹರೀಶ್, ಸ.ನಂ. 154 ರಲ್ಲಿ ತಾವು 40 ವರ್ಷಗಳಿಂದ 4 ಎಕರೆ ಜಮೀನು ಬಗರ್ ಹುಕುಂ‌ ಜಮೀನು ಹೊಂದಿದ್ದು, ನಿಯಮಾನುಸಾರ ಬಗರ್ ಹುಕುಂ ಅರ್ಜಿ ಸಹ ಸಲ್ಲಿಸಿರುತ್ತೇನೆ, ಜಮೀನು ಮಂಜೂರು ಮಾಡಿಸಿಕೊಡಬೇಕಾಗಿ ಕೋರಿ ಅರ್ಜಿ ಸಲ್ಲಿಸಿದರು.

ನಗರದ ಕೆ ಎಂ ರವಿ ಇವರು ಅರ್ಜಿ ಸಲ್ಲಿಸಿ ಸರ್ವೆ ನಂ 3, 15 ರ ಬಸವನಬ್ಯಾಣ ಮತ್ತು ಸ.ನಂ.27 ಮತ್ತು 77 ಗಿಣಿಕಲ್ ಸರ್ಕಾರಿ ಹಿ.ಪ್ರಾ ಬಾಲಕರ ಶಾಲೆ ಸಂಬಂಧಿಸಿದಂತೆ 1955 ರಲ್ಲಿ ಮೈಸೂರು ಮಹಾರಾಜರು 10 ಎಕರೆ ಜಮೀನು ಶಾಲೆಗೆ ನೀಡಿದ್ದು, ಅದರಿಂದ ಬರುವ ಆದಾಯ ಶಾಲೆಗೆ ಹೋಗುತ್ತಿಲ್ಲ. ಗೇಣಿಕಾರರ ಅನುಭೋಗದಲ್ಲಿರುತ್ತದೆ. ಈ ಜಮೀನಿನಿಂದ ಬರುವ ಆದಾಯ ಶಾಲೆಗೆ ಹೋಗುವಂತೆ ಮಾಡಬೇಕು. ಹಾಗೂ
ಕಾನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಮೀಡಿಯಂ ಆರಂಭಿಸಬೇಕು ಎಂದು ಮನವಿ ಮಾಡಿದರು. ಸಚಿವರು ಡಿಡಿಪಿಯು ರವರು ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಮಳವಳ್ಳಿ ಅಗಸರಕೊಪ್ಪ ಇಲ್ಲಿ ಇಂದಿರಾಗಾಂಧಿ ವಸತಿ ಶಾಲೆಗೆ 11 ಎಕರೆ ಜಾಗ ಗುರುತಿಸಲಾಗಿದ್ದರೂ ಇದುವರೆಗೆ ಮಂಜೂರಾಗಿಲ್ಲ ಶೀಘ್ರವಾಗಿ ಮಂಜೂರು ಮಾಡಬೇಕೆಂದು ಗ್ರಾಮದ ಲಕ್ಷ್ಮಣ ಮತ್ತು ಇತರರು ಅರ್ಜಿ ಸಲ್ಲಿಸಿದರು.
ವೀರಭದ್ರಪ್ಪ ಇವರು ಸ.ನಂ.155 ರ ಜಮೀನನ್ನು ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಅರ್ಜಿ ಸಲ್ಲಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉದ್ಯೋಗಿನಿ ಯೋಜನೆಯಡಿ 2022-23 ರಲ್ಲಿ ಗೀತಾ ಅರ್ಜಿ ಸಲ್ಲಿಸಿದ್ದರೂ ಇದುವರೆಗೆ ಸಹಾಯಧನ ಬಂದಿರುವುದಿಲ್ಲವೆಂದು ಅರ್ಜಿ ಸಲ್ಲಿಸಿದರು.

ಕೆರೆಕೊಪ್ಪದ ಶ್ರೀನಿವಾಸ ಅರ್ಜಿ ಸಲ್ಲಿಸಿ, ತಾವು ಮನೆ ಮೇಲುಂದ ಬಿದ್ದು ಕೈ ಮುರಿದಿದ್ದು ಯಾವುದೇ ಕೆಲಸ ಮಾಡಲು ಬಾರದ ಕಾರಣ ಅಂಗವಿಕಲ ಮಾಸಿಕ ವೇತನ ನೀಡುವಂತೆ ಮನವಿ ಸಲ್ಲಿಸಿದರು.ತ್ರಿಣಿವೆ, ನೆಲ್ಲುಂಡೆ ಅಕ್ಕಪಕ್ಕದ ಗ್ರಾಮಸ್ಥರು ತಮ್ಮ ಗ್ರಾಮಗಳಿಗೆ ಸರ್ಕಾರಿ ಬಸ್ ಬಿಡುವಂತೆ ಕೋರಿದರು.

ದೋಬೈಲು ಗ್ರಾಮದ ಮಹೇಂದ್ರ ಬುಕ್ಕಿವರೆ ಅರ್ಜಿ ಸಲ್ಲಿಸಿ, ಕೆರೆಹಳ್ಳಿ ಹೋಬಳಿ ಗುಬ್ಬಿಗ ಗ್ರಾಮದ ಮುಳಗಡೆ ರೈತರ ಭೂಮಿಯ ಜಂಟಿ ಸರ್ವೆ ಮಾಡದೇ ಬಿಟ್ಟು ಹೋಗಿರುತ್ತದೆ. ಆದ್ದರಿಂದ ಜಂಟಿ ಸರ್ವೇ ಮಾಡಿಸುವಂತೆ ಹಾಗೂ ಸ.ನಂ. 28 ರಲ್ಲಿ ಕೃಷಿ ಮಾಡಿತ್ತಿರುವ ರೈತರ ಸುಮಾರು 71 ಎಕರೆ ಜಮೀನನ್ನು‌ಪಕ್ಕಾ ಪೋಡಿ ಮಾಡಿಸುವಂತೆ ಕೋರಿದರು.ಜಯನಗರದಲ್ಲಿ ಖಬರಸ್ತಾನಕ್ಕೆ ಜಾಗ ನೀಡಬೇಕೆಂದು ಅಬ್ದುಲ್ ಖಾದರ್ ಮನವಿ ಮಾಡಿದರು.

ವಿದ್ಯುತ್, ಕುಡಿಯುವ ನೀರು , ಬಗರ್ ಹುಕುಂ ಭೂಮಿ‌ ಮಂಜೂರಾತಿ ಸೇರಿದಂತೆ ಇತರೆ ಸಮಸ್ಯೆಗಳ ಕುರಿತು ಮಧ್ಯಾಹ್ನ 2 ಗಂಟೆ ಹೊತ್ತಿಗೆ ಒಟ್ಟು 116 ಅರ್ಜಿಗಳನ್ನು‌‌ ಸ್ವೀಕರಿಸಲಾಯಿತು.
ಸಚಿವರು, ಶಾಸಕರು ಅಹವಾಲು ಆಲಿಸಿ, ಅರ್ಜಿಗಳನ್ನು‌ ಸ್ವೀಕರಿಸಿ ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸೂಚನೆ ನೀಡಿದರು.

About The Author

By ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Leave a Reply

Your email address will not be published. Required fields are marked *