ಡ್ರೈ ಎಣ್ಣೆ ಕುಡಿಯುವ ಬೆಟ್ಟಿಂಗ್ – ಐದು ಕ್ವಾರ್ಟರ್ ಮದ್ಯವನ್ನು ನೀರು ಬೆರಸದೇ ಸೇವಿಸಿ ಯುವಕ ಸಾವು
ಹಣದ ಆಸೆಗಾಗಿ ಬೆಟ್ಟಿಂಗ್ ಕಟ್ಟಿ ಎಣ್ಣೆ ಪಾರ್ಟಿಯಲ್ಲಿ 5 ಬಾಟಲಿ ಎಣ್ಣೆಯನ್ನು ನೀರು ಬೆರೆಸದೇ ಡ್ರೈ ಕುಡಿದು ಮೃತಪಟ್ಟಿರುವ ಘಟನೆ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ನಡೆದಿದೆ.
ಕಾರ್ತಿಕ್ (21) ಮದ್ಯ ಸೇವಿಸಿ ಸಾವನ್ನಪ್ಪಿದ ಯುವಕ. ಐದು ಬಾಟಲ್ ಮದ್ಯಕ್ಕೆ ಒಂದು ಹನಿ ನೀರನ್ನೂ ಬೆರೆಸದೇ ಕುಡಿಯುವುದಾಗಿ ಎದುರಾಳಿ ವ್ಯಕ್ತಿಯೊಂದಿಗೆ 10 ಸಾವಿರ ರೂ. ಹಣಕ್ಕೆ ಬಾಜಿ ಕಟ್ಟಿದ್ದಾನೆ. ಇದೇ ಗ್ರಾಮದ ವೆಂಕಟರಡ್ಡಿ, ಸುಬ್ರಮಣಿ ಮತ್ತು ಇತರೆ ಮೂವರೊಂದಿಗೆ ಬೆಟ್ಟಿಂಗ್ ಕಟ್ಟಿದ್ದಾನೆ.
ಈ ವೇಳೆ ನೀನು 5 ಬಾಟಲಿ ಎಣ್ಣೆಯನ್ನು ಡ್ರೈ ಹೊಡೆದರೆ ಗೆಲ್ಲುತ್ತೀಯಾ ಎಂದು ಬೆಟ್ಟಿಂಗ್ ಕಟ್ಟಿದ್ದಾರೆ. ಮದ್ಯ ಸೇವನೆಯಲ್ಲಿ ನಾನು ಎಂದಿಗೂ ಸೋತಿಲ್ಲವೆಂದು ಕಾರ್ತಿಕ್ 5 ಬಾಟಲಿ ಮದ್ಯವನ್ನು ನೀರು ಬೆರೆಸದೇ ಡ್ರೈ ಸೇವಿಸಿದ್ದಾನೆ. ನಂತರ, ಮದ್ಯದ ಪ್ರಮಾಣ ಹೆಚ್ಚಾಗಿದ್ದರಿಂದ ತೀವ್ರ ಅಸ್ವಸ್ಥನಾದ ಕಾರ್ತಿಕ್, ನಾನು ಬದುಕುವುದಿಲ್ಲ ಆಸ್ಪತ್ರೆಗೆ ಸೇರಿಸಿ ನನ್ನ ಜೀವ ಉಳಿಸಿ ಎಂದು ಬೇಡಿಕೊಂಡಿದ್ದಾನೆ. ಕೂಡಲೇ, ಆತನ ಸ್ನೇಹಿತರು ಮುಳಬಾಗಿಲು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ. ಆದರೆ, ಕಾರ್ತಿಕ್ ದೇಹ ಚಿಕಿತ್ಸೆಗೂ ಸ್ಪಂದಿಸದ ಕಾರಣ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಕಳೆದ ಒಂದು ವರ್ಷದ ಹಿಂದಷ್ಟೇ ಕಾರ್ತಿಕ್ ಮದುವೆ ಮಾಡಿಕೊಂಡಿದ್ದನು. ಗರ್ಭಿಣಿ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದು, ಹೆಂಡತಿ ಕಳೆದ 8 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಾಳೆ. 21 ವರ್ಷ ಪೂರ್ಣಗೊಳ್ಳುವ ಮುನ್ನವೇ ಕಾರ್ತಿಕ್ ಅಪ್ಪನಾಗಿದ್ದಾನೆ. ಮದ್ಯ ಸೇವನೆ ಜೂಜಾಟಕ್ಕೆ ಬಿದ್ದು ಇದೀಗ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.