Headlines

ಕಳೂರುಕಟ್ಟೆಯಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ  – ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಣೆ

ಕಳೂರುಕಟ್ಟೆಯಲ್ಲಿ ನೂತನ ಆಶ್ರಯ ಬಡಾವಣೆ ನಿರ್ಮಾಣ  – ಶಾಸಕ ಬೇಳೂರು ಗೋಪಾಲಕೃಷ್ಣ ಘೋಷಣೆ

ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಸತಿ ರಹಿತರ ಸಂಖ್ಯೆ ಸಾಕಷ್ಟಿರುವ ಕಾರಣಕ್ಕೆ ನೂತನ ಆಶ್ರಯ ಬಡಾವಣೆ ನಿರ್ಮಾಣ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಳೂರು ಗ್ರಾಮದಲ್ಲಿ ಬಡಾವಣೆ ನಿರ್ಮಾಣಕ್ಕಾಗಿ 10 ಎಕರೆ ಭೂ ಮಂಜೂರಾತಿಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಪಟ್ಟಣ ವ್ಯಾಪ್ತಿಯಲ್ಲಿ ಈಗಿರುವ ಬಡಾವಣೆಗಳಲ್ಲಿನ ಎಲ್ಲಾ ನಿವೇಶನಗಳನ್ನೂ ಹಂಚಿಕೆ ಮಾಡಲಾಗಿದೆ. ಇನ್ನೂ 300ಕ್ಕೂ ಅಧಿಕ ಮಂದಿ ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಭೂಮಿಯ ಅಗತ್ಯವಿರುವ ಕಾರಣಕ್ಕೆ ಕಂದಾಯ ಭೂಮಿಯನ್ನು ಪರಿವರ್ತನೆ ಮಾಡಲು ಕೋರಿಕೆ ಸಲ್ಲಿಸುವ ಅಗತ್ಯವಿದೆ ಎಂದರು.

ಮುಳುಗುಡ್ಡೆ ಗ್ರಾಮದ ಆಶ್ರಯ ಬಡಾವಣೆಯ ಟೌನ್ ಪ್ಲಾನಿಂಗ್ ತಪ್ಪಾಗಿರುವುದನ್ನು ಸರಿಪಡಿಸಲು ಅಗತ್ಯ ಕ್ರಮ ವಹಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಈಗಾಗಲೇ ಬಹುತೇಕ ಎಲ್ಲಾ ಮನೆಗಳು ನಿರ್ಮಾಣವಾಗಿರುವ ಕಳೂರುಕಟ್ಟೆಯ ಆಶ್ರಯ ಬಡಾವಣೆಯಲ್ಲಿ ಮೂಲಸೌಕರ‍್ಯಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ತಹಸೀಲ್ದಾರ್ ಎಚ್.ಜೆ.ರಶ್ಮಿ, ಪಟ್ಟಣ ಪಂಚಾಯಿತಿ ಮುಖ್ಯಾಕಾರಿ ಹರೀಶ್, ಅಧ್ಯಕ್ಷ ನಾಗಪ್ಪ, ಆಶ್ರಯ ಸಮಿತಿ ಸದಸ್ಯರಾದ ಬಿ.ಆರ್.ಪ್ರಭಾಕರ, ನಾಸೀರ್, ರಾಧಿಕ ರತ್ನಾಕರಶೆಟ್ಟಿ, ಮೂರ್ತಿ ಪಟ್ಟಣ ಪಂಚಾಯತಿ ಸಿಬ್ಬಂದಿಗಳಾದ ಮಂಜುನಾಥ್, ಪರಶುರಾಮ, ಬಸವರಾಜ್, ಗಿರೀಶ್, ನೇತ್ರಾ, ಆಸ್ಮಾ, ಉಮಾ ಶಂಕರ್, ಶೃತಿ, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಚಂದ್ರಪ್ಪ, ಸರೋಜ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವಿದ್ಯುತ್ ಸಮಸ್ಯೆ ನೀಗಿಸಲು ಕ್ರಮ ; ಶಾಸಕ ಬೇಳೂರು ಗೋಪಾಲಕೃಷ್ಣ

ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚೆಗೆ 40 ಹೊಸ ವಿದ್ಯುತ್ ಪರಿವರ್ತಕಗಳನ್ನು ಅಳವಡಿಸಲಾಗಿದ್ದು, ವಿದ್ಯುತ್ ಸಮಸ್ಯೆ ಸುಧಾರಿಸಿದೆ. ವಿಶೇಷವಾಗಿ ಹೊಸನಗರ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಮೊದಲ ಆದ್ಯೆತೆ ನೀಡಲಾಗಿದೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸೂಚನೆ ನೀಡಿದರು.

ತಾ.ಪಂ ಸಭಾಂಗಣದಲ್ಲಿ ಏರ್ಪಡಿಸಿದ್ದ ಟಾಸ್ಕ್ ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ತಾಲೂಕಿನ ಅಮೃತ ಗ್ರಾಮದಲ್ಲಿ 110 ಕೆವಿ ವಿದ್ಯುತ್ ಕೇಂದ್ರ ಸ್ಥಾಪನೆಗೆ ಚಾಲನೆ ದೊರೆಯಲಿದೆ.

ಹರಿದ್ರಾವತಿ ನೂತನ ಕೇಂದ್ರ ಅಂತಿಮ ಹಂತದಲ್ಲಿದೆ. ಮುಂದಿನ ವರ್ಷ ವಿದ್ಯುತ್ ಸಮಸ್ಯೆ ಬಹುತೇಕ ಇಲ್ಲದಂತಾಗಲಿದೆ. ಆದರೆ ಹಲವು ಕಡೆ ಅನಧಿಕೃತವಾಗಿ ಕೃಷಿ ಪಂಪ್‌ಗಳನ್ನು ಅಳವಡಿಸಿಕೊಂಡು ದಿನವಿಡೀ ನೀರನ್ನು ಹಾಯಿಸುತ್ತಿದ್ದಾರೆ. ಏಕಕಾಲಕ್ಕೆ ಪಂಪ್ ಚಾಲನೆ ಮಾಡುವುದರಿಂದ ವಿದ್ಯುತ್ ಪರಿವರ್ತಕಗಳು ಸುಟ್ಟು ಹೋಗುತ್ತಿವೆ. ಇವುಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಈ ಬಗ್ಗೆ ಏನು ಕ್ರಮ ವಹಿಸಿದ್ದೀರಿ ಎಂದು ಮೆಸ್ಕಾಂ ಅಧಿಕಾರಿಯನ್ನು ಪ್ರಶ್ನಿಸಿದರು.

ರೈತರು ಪಾಳಿಯ ಮೇಲೆ ವಿದ್ಯುತ್ ಪಂಪ್ ಬಳಕೆೆ ಮಾಡಲು ಪ್ರೇರೇಪಿಸಬೇಕು ಎಂದು ಪಿಡಿಓಗಳಿಗೆ ತಿಳಿಸಿದರು.

ಈ ಬಾರಿ ಬೇಸಿಗೆ ಧಗೆ ಹೆಚ್ಚಿದ್ದು, ನೀರಿನ ಮೂಲಗಳು ನಿರೀಕ್ಷೆಗೂ ಮುಂಚಿತವಾಗಿ ಬರಿದಾಗುವ ಲಕ್ಷಣಗಳು ಕಾಣುತ್ತಿವೆ. ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಾಗ್ರತೆ ವಹಿಸಬೇಕು ಎಂದು ಇಲ್ಲಿನ ಕಳೆದ ಮುಂಗಾರಿನಲ್ಲಿ ಉತ್ತಮ ಮಳೆಯಾಗಿತ್ತು. ಇಷ್ಟರಲ್ಲಿ ಮಳೆ ಬಂದಿದ್ದರೆ ಸಮಸ್ಯೆ ಅಷ್ಟೇನೂ ಗಂಭೀರ ಸ್ವರೂಪ ಪಡೆಯುತ್ತಿರಲಿಲ್ಲ. ಆದರೆ ಈವರೆಗೂ ಮಳೆ ಸುರಿಯದ ಹಿನ್ನೆಲೆಯಲ್ಲಿ ನೀರು ಹಾಗೂ ವಿದ್ಯುತ್‌ಗೆ ಬೇಡಿಕೆ ಹೆಚ್ಚಿದೆ. ಕ್ಷೇತ್ರ ವ್ಯಾಪ್ತಿಯಲ್ಲಿ 40 ಹೊಸ ಪರಿವರ್ತಕಗಳನ್ನು ಇತ್ತೀಚೆಗಷ್ಟೇ ಅಳವಡಿಸಿದ್ದು, ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಕ್ರಮ ವಹಿಸಲಾಗಿದೆ ಎಂದರು.

ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕುಡಿವ ನೀರಿನ ಸಮಸ್ಯೆ ಕುರಿತು ಪ್ರತ್ಯೇಕವಾಗಿ ಮಾಹಿತಿ ಪಡೆದರು. ಜೆಜೆಎಂ ಕಾಮಗಾರಿಗಳ ಪ್ರಗತಿ ಕುರಿತು ಎಂಜಿನಿಯರ್‌ಗಳಿಂದ ಮಾಹಿತಿ ಪಡೆದರು. ಅಗತ್ಯವಿರುವೆಡೆ ಕೊಳವೆಬಾವಿ ಕೊರೆಸಲು ಕ್ರಮ ವಹಿಸುವಂತೆ ತಿಳಿಸಿದರು.

ಮಳೆ ಅಥವಾ ನೈಸರ್ಗಿಕ ವಿಕೋಪ ಆದಲ್ಲಿ ತಕ್ಷಣ ಸ್ಪಂದಿಸುವಂತೆ ತಹಸೀಲ್ದಾರ್ ಎಚ್.ಜೆ.ರಶ್ಮಿರವರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನರೇಂದ್ರಕುಮಾರ್, ಸಹಾಯಕ ನಿರ್ದೇಶಕ ಪವನ್‌ಕುಮಾರ್, ನರೇಗಾ ಸಹಾಯಕ ನಿರ್ದೇಶಕ ರಾಜೇಂದ್ರಕುಮಾರ್ ಹೊಸನಗರ ತಾಲ್ಲೂಕಿನ ಎಲ್ಲ ಪಿಡಿಓಗಳು ಸೇರಿದಂತೆ ಕಂದಾಯ, ಪಂಚಾಯತ್‌ರಾಜ್ ಮತ್ತಿತರರ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *