ಮನೆ ಕಳವು ಮಾಡಿದ್ದ ಮೂವರ ಬಂಧನ – 26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ
ಭದ್ರಾವತಿ , ಜ. 4: ಮನೆಗಳ್ಳನ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೊಳೆಹೊನ್ನೂರು ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಘಟನೆ ನಡೆದಿದೆ.
ಭದ್ರಾವತಿ ತಾಲೂಕು ತಿಮ್ಲಾಪುರದ ಕೊರಚರಹಟ್ಟಿ ಗ್ರಾಮದ ನಿವಾಸಿಗಳಾದ ದರ್ಶನ್ (21), ಧನಂಜಯ (24) ಹಾಗೂ ರವಿ (23) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. 28-12-2024 ರಂದು ಸದರಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿಗಳಿಂದ ಹಾಲಿ ಮಾರುಕಟ್ಟೆ ಮೌಲ್ಯದ ಅಂದಾಜು 24,50,000 ರೂ. ಮೌಲ್ಯದ 350 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ ಅಂದಾಜು 2,00,000 ರೂ. ಮೌಲ್ಯದ 2 ಕೆ.ಜಿ 500 ಗ್ರಾಂ ತೂಕದ ಬೆಳ್ಳಿಯ ಅಭರಣಗಳು ಸೇರಿದಂತೆ, ಒಟ್ಟಾರೆ 26,50,000 ರೂ. ಮೌಲ್ಯದ ಬಂಗಾರ-ಬೆಳ್ಳಿಯ ಆಭರಣ ವಶಕ್ಕೆ ಪಡೆಯಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಡಿವೈಎಸ್ಪಿ ನಾಗರಾಜ್ ಕೆ ಆರ್ ಮಾರ್ಗದರ್ಶನದಲ್ಲಿ ಹೊಳೆಹೊನ್ನೂರು ಠಾಣೆ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ರಮೇಶ್, ಕೃಷ್ಣನಾಯ್ಕ್, ಸಿಬ್ಬಂದಿಗಳಾದ ಹೆಚ್ ಸಿ ಅಣ್ಣಪ್ಪ, ಪ್ರಕಾಶ್ ನಾಯ್ಕ್, ಮಂಜುನಾಥ್, ಪ್ರಸನ್ನ, ಪಿಸಿಗಳಾದ ವಿಶ್ವನಾಥ್ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಕಳವು ಪ್ರಕರಣ :
11-05-2023 ರಂದು ಭದ್ರಾವತಿ ಅರಬಿಳಚಿ ಗ್ರಾಮದ ರೈತ ಜಯಣ್ಣರವರು ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಕುಟುಂಬ ಸದಸ್ಯರೆಲ್ಲರು ತಿರುಪತಿ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಆರೋಪಿಗಳು ನಗನಾಣ್ಯ ಕಳವು ಮಾಡಿದ್ದರು.
ತಿರುಪತಿಯಿಂದ ಮನೆಗೆ ವಾಪಾಸ್ ಆಗಮಿಸಿದಾಗ, ಮನೆಯ ಮುಂಬಾಗಿಲು ಹೊಡೆದು ಮನೆಯ ರೂಮ್ ನಲ್ಲಿದ್ದ ಕಬ್ಬಿಣದ ಲಾಕರ್ ಸಮೇತ ಅಂದಾಜು ಮೌಲ್ಯ 17,00,000 ರೂ.ಗಳ 599 ಗ್ರಾಂ ತೂಕದ ಪುರಾತನ ಕಾಲದ ಬಂಗಾರದ ಆಭರಣ ಹಾಗೂ ಅಂದಾಜು ಮೌಲ್ಯ 1,50,100 ರೂ.ಗಳ 3 ಕೆಜಿ 80 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ 1,00,000 ನಗದು ಕಳವು ಮಾಡಿದ್ದು ಬೆಳಕಿಗೆ ಬಂದಿತ್ತು.
ಒಟ್ಟಾರೆ 19,80,100 ರೂ. ಮೌಲ್ಯದ ನಗನಾಣ್ಯ ಕಳವು ಮಾಡಲಾಗಿತ್ತು. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ ಕೆ ಮಿಥುನ್ ಕುಮಾರ್ ಶ್ಲಾಘಿಸಿದ್ದಾರೆ.