ಕ್ರಿಸ್ಮಸ್ ರಜೆ ಹಿನ್ನಲೆ ಸ್ನೇಹಿತರೊಂದಿಗೆ ಈಜಲು ತೆರಳಿದ್ದ ವಿದ್ಯಾರ್ಥಿ ಸಾವು
ಶಿವಮೊಗ್ಗ: ನಗರದ ಕಲ್ಲೂರು-ಮಂಡ್ಲಿ ಬಳಿಯ ಬಂಡೆಕಲ್ಲು ಎಂಬಲ್ಲಿ ತುಂಗಾ ಚಾನೆಲ್‌ಗೆ ಕ್ರಿಸ್ಮಸ್ ದಿನದಂದು ಈಜಲು ತೆರಳಿದ್ದ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಮುಳುಗಿ ಸಾವನ್ನಪ್ಪಿದ್ದು, ಗುರುವಾರ ಶವ ಪತ್ತೆಯಾಗಿದೆ.
ಹಳೆ ಮಂಡ್ಲಿ ನಿವಾಸಿ ಮೋಹಿತ್ (೧೫) ಸ್ನೇಹಿತರೊಂದಿಗೆ ಬುಧವಾರ ಮಧ್ಯಾಹ್ನ ೩ ಗಂಟೆ ಹೊತ್ತಿಗೆ ಕಲ್ಲೂರು ಮಂಡ್ಲಿ ಬಳಿಯ ಚಾನೆಲ್ ಬಳಿ ಹೋಗಿದ್ದನು. ನೀರು ನೋಡಿ ಈಜಲು ಹೋದ ಬಾಲಕ ನೀರುಪಾಲಾಗಿದ್ದನು.
ಈತನ ಜೊತೆ ಹೋಗಿದ್ದ ಸ್ನೇಹಿತರು ಭಯದಿಂದ ಯಾರಿಗೂ ಹೇಳದೆ ಮನೆಗೆ ಹೋಗಿದ್ದರು. ಸಂಜೆ ಹೊತ್ತು ಎಷ್ಟು ಹೊತ್ತಾದರೂ ಬಾರದ ಮಗನಿಗೆ ಪೋಷಕರ ಹುಡುಗಾಟ ಆರಂಭಿಸಿ, ಆತನ ಸ್ನೇಹಿತರನ್ನು ವಿಚಾರಿಸಿದಾಗ ಚಾನೆಲ್ ಗೆ ಇಳಿದಾಗ ಮುಳುಗಿ ಕಾಣೆಯಾದ ಸಂಗತಿಯನ್ನು ಬಾಯಿಬಿಟ್ಟಿದ್ದಾರೆ.
ಕೂಡಲೇ ಅಗ್ನಿಶಾಮಕದಳ ದವರಿಗೆ ಕರೆ ಮಾಡಿದಾಗ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಯತ್ನಿಸಿದರೂ ಮೋಹಿತ್ ಪತ್ತೆಯಾಗಿರಲಿಲ್ಲಿ. ಗುರುವಾರ ಬೆಳಿಗ್ಗೆ ಆತನ ಮೃತ ದೇಹ ಪತ್ತೆಯಾಗಿದೆ.
ಮೋಹಿತ್ ಶಿವಮೊಗ್ಗದ ಎನ್ ಇ ಎಸ್ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದನು.