ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ ವಂಚಿಸಿದ ಆನ್ ಲೈನ್ ಖದೀಮರು
ಶಿವಮೊಗ್ಗ: ಪ್ರತಿಷ್ಠಿತ ಟ್ರೇಡಿಂಗ್ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಉದ್ಯೋಗಿಯೊಬ್ಬರಿಗೆ (ಹೆಸರು ಗೌಪ್ಯ) ಆನ್‌ಲೈನ್ ವಂಚಕರು 11.26 ಲಕ್ಷ ರೂ. ವಂಚಿಸಿದ್ದಾರೆ.
ಬ್ಯಾಂಕ್ ಒಂದರ ಮಹಿಳಾ ಉದ್ಯೋಗಿಯ ಮೊಬೈಲ್‌ಗೆ ಪ್ರತಿಷ್ಠಿತ ಷೇರು ವಹಿವಾಟು ಸಂಸ್ಥೆಯೊಂದರ ಹೆಸರಿನಲ್ಲಿ ಮೆಸೇಜ್ ಬಂದಿತ್ತು. ಪರಿಶೀಲಿಸಿದ ಬ್ಯಾಂಕ್ ಉದ್ಯೋಗಿ ಹಣ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದರಿಂದ ಅವರ ಮೊಬೈಲ್‌ಗೆ ಲಿಂಕ್ ಕಳುಹಿಸಲಾಗಿತ್ತು. ಆ ಲಿಂಕ್ ಬಳಸಿ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಹೂಡಿಕೆ ಮಾಡುವಂತೆ ತಿಳಿಸಲಾಗಿತ್ತು. ಅಂತೆಯೇ ಬ್ಯಾಂಕ್ ಉದ್ಯೋಗಿ ಮೊದಲಿಗೆ 2 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ಇದಕ್ಕೆ 40 ಸಾವಿರ ರೂ. ಲಾಭಾಂಶ ದೊರೆತಿದೆ ಎಂದು ಆ್ಯಪ್‌ನಲಿ ತೋರಿಸಿತ್ತು. ಆಗ ಬ್ಯಾಂಕ್ ಉದ್ಯೋಗಿ 2 ಲಕ್ಷ ರೂ. ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದರು.
ಬಾಂಕ್ ಉದ್ಯೋಗಿಯು ಮರುದಿನ ಪುನಃ 1.80 ಲಕ್ಷ ರೂ. ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ಬಳಿಕ ಹಂತ ಹಂತವಾಗಿ ಲಕ್ಷಾಂತರ ರೂ. ಹೂಡಿಕೆ ಮಾಡಿದ್ದರು. ಹಾಗಾಗಿ ಷೇರು ವಹಿವಾಟಿನಿಂದ ಲಾಭಾಂಶ ಹೆಚ್ಚಾಗಿದೆ ಎಂದು ಆ್ಯಪ್‌ನಲ್ಲಿ ತೋರಿಸಲಾಗಿತ್ತು. ಒಟ್ಟು 33 ಲಕ್ಷ ರೂ. ಲಾಭ ಗಳಿಸಿರುವುದಾಗಿ ಆ್ಯಪ್‌ನಲ್ಲಿ ಪ್ರಕಟಿಸಲಾಗಿತ್ತು. ಹಣ ವಿತ್ ಡ್ರಾ ಮಾಡಲು ಮುಂದಾದಾಗ ತಮಗೆ ಶೇ.10ರಷ್ಟು ಕಮಿಷನ್ ನೀಡಬೇಕು ಎಂದು ಕಂಪನಿಯವರು ಸೂಚಿಸಿದ್ದರು. ಹಣವಿಲ್ಲ ಎಂದು ಬ್ಯಾಂಕ್ ಉದ್ಯೋಗಿ ತಿಳಿಸಿದಾಗ 1 ಲಕ್ಷ ರೂ. ಕಮಿಷನ್ ಪಾವತಿಸಿದರೆ 10 ಲಕ್ಷ ರೂ. ವಿತ್ ಡ್ರಾ ಮಾಡಲು ಅವಕಾಶ ಕೊಡುತ್ತೇವೆ ಎಂದು ತಿಳಿಸಿದ್ದರು.
ಒಂದು ಲಕ್ಷ ರೂ. ಪಡೆದವರು ಬಳಿಕ ವರಸೆ ಬದಲಿಸಿದ್ದರು. ಇನ್ನೂ 2 ಲಕ್ಷ ರೂ. ವರ್ಗಾಯಿಸುವಂತೆ ಬ್ಯಾಂಕ್ ಉದ್ಯೋಗಿಗೆ ಒತ್ತಾಯಿಸಿದ್ದರು. ಅನುಮಾನಗೊಂಡು ವಿಚಾರಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಷೇರು ವಹಿವಾಟು ಮತ್ತು ಅಧಿಕ ಲಾಭಾಂಶದ ಆಸೆ ಹುಟ್ಟಿಸಿ 11.26 ಲಕ್ಷ ರೂ. ಹಣ ವಂಚಿಸಲಾಗಿದೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆ ಸಂಬಂಧ ಶಿವಮೊಗ್ಗದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.