ರಿಪ್ಪನ್‌ಪೇಟೆ : ನಾನು ಯಾವುದೇ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರಲಿಲ್ಲ ಎಂದು ಅಮೃತ ಗ್ರಾಪಂ ನೂತನ ಅಧ್ಯಕ್ಷ ಸಚಿನ್ ಗೌಡ ಸ್ಪಷ್ಟನೆ ನೀಡಿದ್ದಾರೆ.
ಪಟ್ಟಣದಲ್ಲಿ ಇಂದು ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಅವರು ಅಮೃತ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ನಾನು ಪ್ರಬಲ ಆಕಾಂಕ್ಷಿಯಾಗಿದ್ದು ಈ ಬಗ್ಗೆ ಬಿಜೆಪಿ ಪಕ್ಷದ ಮುಖಂಡರ ಬಳಿ ಪ್ರಸ್ತಾಪಿಸಿದಾಗ ಅವರು ಮನ್ನಣೆ ನೀಡದ ಕಾರಣ ಬಿಜೆಪಿ ಪಕ್ಷದ ಬಂಡಾಯವಾಗಿ ಸ್ಪರ್ಧಿಸಿದ್ದೆ ಆದರೆ ಕೆಲವು ಮಾದ್ಯಮಗಳಲ್ಲಿ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಜಾರಿದ ಗ್ರಾಮ ಪಂಚಾಯತ್ ಎಂದು ವರದಿ ಬಂದಿದ್ದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದರು.
ನನ್ನ ಮೇಲಿನ ಅಭಿಮಾನದಿಂದ ಬಿಜೆಪಿಯ ನಾಲ್ವರು ಹಾಗೂ ಕಾಂಗ್ರೆಸ್ ಪಕ್ಷ ಬೆಂಬಲಿತ ಇಬ್ಬರು ಗ್ರಾಪಂ ಸದಸ್ಯರುಗಳು ನನಗೆ ಮತ ನೀಡುವ ಮೂಲಕ ನನ್ನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಎರಡು ಪಕ್ಷದ ಬೆಂಬಲಿತ ಗ್ರಾಪಂ ಸದಸ್ಯರುಗಳ ಒಕ್ಕೊರಲ ಬೆಂಬಲದಿಂದ ನನಗೆ ಗೆಲುವಾಗಿದೆಯೇ ಹೊರತು ಯಾವುದೇ ರೀತಿಯ ಒಡಂಬಡಿಕೆ ಮಾಡಿಕೊಂಡಿಲ್ಲ ಎಂದು ಹೇಳಿದರು.
ನಾನು ಬಿಜೆಪಿ ಪಕ್ಷದ ಸಕ್ರೀಯ ಕಾರ್ಯಕರ್ತನಾಗಿದ್ದು 2020 ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗ್ರಾಪಂ ಸದಸ್ಯನಾಗಿ ಆಯ್ಕೆಯಾಗಿದ್ದೆ ಆ ನಂತರದಲ್ಲಿ ಬದಲಾದ ರಾಜಕೀಯ ಸ್ಥಿತ್ಯಂತರಗಳಿಂದ ಇತ್ತೀಚೆಗೆ ರಾಷ್ಟಭಕ್ತ ಬಳಗದೊಂದಿಗೆ ಗುರುತಿಸಿಕೊಂಡಿದ್ದೇ ಆದರೆ ಆ ನಂತರದಲ್ಲೂ ಬಿಜೆಪಿಯ ಸದಸ್ಯತ್ವ ಅಭಿಯಾನದಲ್ಲೂ ಸಕ್ರೀಯವಾಗಿದ್ದೆನೆ ಎಂದು ಸ್ಪಷ್ಟನೆ ನೀಡಿದರು.