ರಾಜ್ಯ ಸರ್ಕಾರದಿಂದ ಮಲೆನಾಡಿಗರಿಗೆ ಗುಡ್ ನ್ಯೂಸ್ : ಡಾ. ಕಸ್ತೂರಿ ರಂಗನ್ ವರದಿ ತಿರಸ್ಕಾರ
ಮಲೆನಾಡಿಗರ ಬಹುಕಾಲದ ಬೇಡಿಕೆಯನ್ನು ಪುರಸ್ಕರಿಸಲಾಗಿದ್ದು, ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ನಿರ್ಧರಿಸಲಾಗಿದೆ.
ಪಶ್ಚಿಮ ಘಟ್ಟ ವಲಯವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಿದಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಒಕ್ಕಲೇಳಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು.
ರಾಜ್ಯದ ಪಶ್ಚಿಮಘಟ್ಟದ 20,668 ಚ.ಕಿ.ಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಿರುವ ಡಾ. ಕೆ. ಕಸ್ತೂರಿ ರಂಗನ್ ವರದಿಯನ್ನು ಸರ್ಕಾರ ಮತ್ತೆ ತಿರಸ್ಕರಿಸಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಟ್ವೀಟ್ ಹಂಚಿಕೊಂಡಿದ್ದು, ಮಲೆನಾಡಿಗರ ಬಹುಕಾಲದ ಬೇಡಿಕೆಯನ್ನು ನಾವು ಪುರಸ್ಕರಿಸಿದ್ದೇವೆ. ಪಶ್ಚಿಮ ಘಟ್ಟ ವಲಯವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಘೋಷಣೆ ಮಾಡಿದಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ ಸಾವಿರಾರು ಕುಟುಂಬಗಳು ಒಕ್ಕಲೇಳಬೇಕಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಮಲೆನಾಡಿಗರ ಈ ಆತಂಕವನ್ನು ನಿವಾರಿಸುವ ಉದ್ದೇಶದೊಂದಿಗೆ ಡಾ. ಕಸ್ತೂರಿ ರಂಗನ್ ವರದಿಯನ್ನು ನಿನ್ನೆ ನಡೆದ ಸಚಿವ ಸಂಪುಟ ಸಭೆಯು ಸಂಪೂರ್ಣವಾಗಿ ತಿರಸ್ಕರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿಯ ಅನ್ವಯ 20668 ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸಲಾಗಿದೆ. ವಾಸ್ತವ ಲೋಪಗಳ ತಿದ್ದುಪಡಿ ಮಾಡಿದಾಗ ಪರಿಸರ ಸೂಕ್ಷ್ಮ ಪ್ರದೇಶ 19,252.70 ಚ.ಕಿ.ಮೀ. ಆಗುತ್ತದೆ. ವಿವಿಧ ಕಾನೂನುಗಳ ಅಡಿಯಲ್ಲಿ ಸಂರಕ್ಷಿತ ಪ್ರದೇಶ, ಅಧಿಸೂಚಿತ ಅರಣ್ಯ ಪ್ರದೇಶ, ಪರಿಸರ ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ ಅರಣ್ಯ ಅಥವಾ ಪರಿಸರ ಸೂಕ್ಷ್ಮ ವಲಯವಾಗಿ ಅಧಿಸೂಚಿಸಿ 16036 ಚ.ಕಿ.ಮೀ, ಪ್ರದೇಶ ಸಂರಕ್ಷಿಸಲಾಗುತ್ತಿದೆ.