ನಕಲಿ ಹಕ್ಕುಪತ್ರ ಅಡ್ಡೆ ಮೇಲೆ ತಹಶೀಲ್ದಾರ್ ರಶ್ಮಿ ಹಾಲೇಶ್ ದಾಳಿ – ಹತ್ತಾರು ಅಧಿಕಾರಿಗಳ ಸೀಲ್ , ನಕಲಿ ಹಕ್ಕುಪತ್ರ ಪತ್ತೆ
ಹೊಸನಗರ : ನಕಲಿ ಹಕ್ಕುಪತ್ರ ಅಡ್ಡೆ ಮೇಲೆ ಖಚಿತ ಮಾಹಿತಿಯ ಮೇರೆಗೆ ಹೊಸನಗರ ತಹಶೀಲ್ದಾರ್ ರಶ್ಮಿ ಹಾಲೇಶ್ ನೇತ್ರತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿ ತಾಲೂಕಿನ ಪ್ರಮುಖ ಅಧಿಕಾರಿಗಳ ನಕಲಿ ಸೀಲ್ ಗಳು , ನೂರಾರು ನಕಲಿ ಹಕ್ಕುಪತ್ರಗಳನ್ನು ಪತ್ತೆ ಹಚ್ಚಿದ್ದಾರೆ.
ತಾಲೂಕಿನಲ್ಲೆಡೆ ನಕಲಿ ಹಕ್ಕುಪತ್ರಗಳ ಜಾಲ ಹಲವಾರು ವರ್ಷಗಳಿಂದ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತಿದ್ದು ಈ ಬಗ್ಗೆ ಮಾದ್ಯಮಗಳು ತಹಶೀಲ್ದಾರ್ ರಶ್ಮಿ ಹಾಲೇಶ್ ಗಮನಕ್ಕೆ ತಂದಿದ್ದವು.ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ತಹಶೀಲ್ದಾರ್ ರವರು ಇಂದು ಖಚಿತ ಮಾಹಿತಿಯನ್ನಾಧರಿಸಿ ತಾಲೂಕಿನ ಎಲ್ ಗುಡ್ಡೆಕೊಪ್ಪ ಗ್ರಾಮದ ಮಳಲಿ ರಾಜೇಂದ್ರ ಎಂಬುವವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ದಾಳಿಯಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್ ಕಛೇರಿಯ ಸೀಲ್ ಗಳು , ವಿವಿಧ ಸೊಸೈಟಿಗಳ ಸೀಲು ,ತಾಲೂಕು ಕಛೇರಿಯ ಸೀಲ್ ಗಳು ,ಕರ್ನಾಟಕ ಬ್ಯಾಂಕ್ , SBI ಬ್ಯಾಂಕ್ ನ ಸೀಲ್ ಗಳು ,ಖಾಲಿ ಹಕ್ಕು ಪತ್ರ ಪೇಪರ್ ಗಳು ಹಾಗೂ ಪ್ರಿಂಟಾಗಿರುವ ನಕಲಿ ಹಕ್ಕುಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ.