ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉನ್ನತ ಹುದ್ದೆಗೇರಬೇಕು – ಶಾಸಕ ಬೇಳೂರು

ರಿಪ್ಪನ್‌ಪೇಟೆ ಸರ್ಕಾರಿ ಪಿಯು ಕಾಲೇಜಿನಲ್ಲಿ ನೀಟ್ ಹಾಗೂ ಸಿಇಟಿ ತರಬೇತಿ ಕೇಂದ್ರ ಉದ್ಘಾಟನೆ

ರಿಪ್ಪನ್‌ಪೇಟೆ : ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರ್ಕಾರದ ಸವಲತ್ತನ್ನು ಬಳಸಿಕೊಂಡು ಶೈಕ್ಷಣಿಕ ಜೀವನದಲ್ಲಿ ಉತ್ತಮ ಸಾಧನೆಗೈದು ದೇಶ ಉನ್ನತ ಹುದ್ದೆಗಳಿಗೆ ಹೋಗಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷರಾದ ಬೇಳೂರು ಗೋಪಾಲಕೃಷ್ಣ ಹೇಳಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ KCET NEET JEE ಹಾಗೂ ವೃತ್ತಿಪರ ಕೋರ್ಸ್ ಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಯಾದ ಮೂಲ ಸೌಕರ್ಯಗಳಿದ್ದಲ್ಲಿ ನಮ್ಮ ಗ್ರಾಮೀಣ ಪ್ರತಿಭೆಗಳು ಎಂತಹ ಸಾಧನೆಯನ್ನು ಮಾಡುತ್ತಾರೆ. ದ್ವಿತೀಯ ಪಿಯುಸಿ ನಂತರ ವೈದ್ಯಕೀಯ, ದಂತ ವೈದ್ಯಕೀಯ ಪ್ರವೇಶಕ್ಕೆ, ಇಂಜಿನಿಯರ್ ಸೀಟ್ ಪಡೆಯಬೇಕಿದ್ದಲ್ಲಿ CET,NEET ಅನಿವಾರ್ಯವಾಗಿದೆ.ಗ್ರಾಮೀಣ ಭಾಗದ ಪ್ರತಿಭೆಗಳು ಕೋಚಿಂಗ್ ಪಡೆಯಲು ದೂರದೂರಿಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಕಾಲೇಜಿನಲ್ಲಿಯೇ ಕೋಚಿಂಗ್ ನೀಡಲಿದ್ದೇವೆ ಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಜಿ ಆರ್ ಗೋಪಾಲಕೃಷ್ಣ ಮಾತನಾಡಿ ಪಟ್ಟಣದ ವಿದ್ಯಾರ್ಥಿಗಳು CET,NEET ಕೋಚಿಂಗ್ ಗೆ ಶಿವಮೊಗ್ಗ, ಸಾಗರ ಹಾಗೂ ಬೆಂಗಳೂರಿಗೆ ತೆರಳುತಿದ್ದರು ಅದಕ್ಕಾಗಿ ಶಾಸಕರ ಬಳಿ ಸಿಡಿಸಿ ಸಮಿತಿಯವರು ಚರ್ಚಿಸಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಹಕಾರದೊಂದಿಗೆ ನಮ್ಮ ಕಾಲೇಜಿನಲ್ಲಿಯೇ ಕೋಚಿಂಗ್ ನೀಡಲು ತೀರ್ಮಾನಿಸಿ ಇಂದು ಪ್ರಾರಂಭಿಸಿದ್ದೇವೆ ಇದರಿಂದ ಮುಂದಿನ ದಿನಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಭಾರಿ ಪ್ರಾಂಶುಪಾಲರಾದ ವಾಸುದೇವ್ ದ್ವಿತೀಯ ಪಿಯುಸಿ ನಂತರ ರಾಷ್ಟ್ರೀಯ ಪರೀಕ್ಷಾ ಏಜನ್ಸಿ(ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಹಾಗೂ ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ, ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಯನ್ನು ಎದುರಿಸಬೇಕು.ಈ ಪರೀಕ್ಷೆಗಳ ರ್ಯಾಂಕ್ ಆಧಾರದ ಮೇಲೆಯೇ ಆಯಾ ಕೋರ್ಸ್‌ಗಳಿಗೆ ಸೀಟು ಹಂಚಿಕೆ ಮಾಡಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ನಿತ್ಯದ ತರಗತಿಯ ಜತೆ ಪ್ರತಿ ಶನಿವಾರ ಮತ್ತು ಭಾನುವಾರ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಹೇಗೆ ಎದುರಿಸಬೇಕು, ಸಿದ್ಧತೆ ಹೇಗಿರಬೇಕು ಎನ್ನುವುದರ ಜೊತೆಗೆ, ಪ್ರತೀ ವಿಷಯದ ವಿಸ್ತೃತವಾದ ವಿವರಣೆ ನೀಡಲಾಗುತ್ತದೆ ಎಂದರು.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷರಾದ ಧನಲಕ್ಷ್ಮಿ ಗಂಗಾಧರ್ , ನಿವೃತ್ತ ಪ್ರಾಂಶುಪಾಲರಾದ ಮಂಜುನಾಥ್ ಆಲೆಮನೆ , ಗ್ರಾಪಂ ಉಪಾಧ್ಯಕ್ಷ ಸುಧೀಂದ್ರ ಪೂಜಾರಿ , ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ರಫ಼ಿ ರಿಪ್ಪನ್‌ಪೇಟೆ , ನಾಗಪ್ಪ ಕಟ್ಟೆ , ಬೋರಪ್ಪ , ಷಣ್ಮುಖ ಎನ್ ಹಾಗೂ ಇನ್ನಿತರರಿದ್ದರು.

Leave a Reply

Your email address will not be published. Required fields are marked *