ಹೊಸನಗರ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ

ಹೊಸನಗರ ಪಟ್ಟಣ ಪಂಚಾಯತ್ ಕಾಂಗ್ರೆಸ್ ತೆಕ್ಕೆಗೆ – ಗೆದ್ದು ಬೀಗಿದ ಶಾಸಕ ಬೇಳೂರು

ಹೊಸನಗರ ಪಟ್ಟಣ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ನಾಗಪ್ಪ ಹಾಗೂ ಉಪಾಧ್ಯಕ್ಷರಾಗಿ ಚಂದ್ರಕಲಾ ನಾಗರಾಜ್ ಆಯ್ಕೆಯಾಗಿದ್ದಾರೆ.

ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಚುನಾವಣಾ ಪ್ರಕ್ರಿಯೆ ನಡೆಯಿತು. ಪರಿಶಿಷ್ಟ ಜಾತಿ ಮೀಸಲಾತಿ ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಸದಸ್ಯ ಕಾಂಗ್ರೆಸ್ ಬೆಂಬಲಿತ ನಾಗಪ್ಪ ಒಬ್ಬರೇ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಅವಿರೋಧ ಆಯ್ಕೆ ನಡೆಯಿತು.

ಸಾಮಾನ್ಯ ಮಹಿಳೆ ಮೀಸಲಾತಿಯ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ ಚಂದ್ರಕಲಾ ನಾಗರಾಜ್ ಹಾಗೂ ಬಿಜೆಪಿ ಬೆಂಬಲಿತ ಜೆಡಿಎಸ್ ಪಕ್ಷದ ಸದಸ್ಯೆ ಕೃಷ್ಣವೇಣಿ ಸ್ಪರ್ಧಿಸಿದ್ದರು. ಚಂದ್ರಕಲಾ ನಾಗರಾಜ್ ಪರವಾಗಿ 6 ಹಾಗೂ ಕೃಷ್ಣವೇಣಿ ಪರವಾಗಿ 3 ಮತಗಳು ಚಲಾವಣೆಗೊಂಡಿತು. ಒಟ್ಟು 11 ಸದಸ್ಯರ ಪೈಕಿ ಬಿಜೆಪಿಯ ಗುಲಾಬಿ ಮರಿಯಪ್ಪ, ಗುರುರಾಜ್ ಹಾಗೂ ಹಾಲಗದ್ದೆ ಉಮೇಶ್ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ಕಾಂಗ್ರೆಸ್ ಪಕ್ಷದ 5 ಸದಸ್ಯರು ಸೇರಿದಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಕಲಾ ನಾಗರಾಜ ಪರವಾಗಿ ಮತ ಚಲಾಯಿಸಿದರು.

ಚುನಾವಣಾಧಿಕಾರಿ ತಹಸೀಲ್ದಾರ್ ಎಚ್.ಜೆ.ರಶ್ಮಿ ಅವರು ಅಧ್ಯಕ್ಷ ಸ್ಥಾನಕ್ಕೆ ನಾಗಪ್ಪ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಕಲಾ ನಾಗರಾಜ್ ಅವರು ಆಯ್ಕೆಯಾಗಿರುವುದನ್ನು ಘೋಷಿಸಿದರು.

ಶಾಸಕ ಬೇಳೂರು ಗೋಪಾಲಕೃಷ್ಣಕೃಷ್ಣ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥ್ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಈ ಚುನಾವಣಾ ತಂತ್ರರೂಪಿಸಿ ತಮ್ಮ ಅಭ್ಯರ್ಥಿಗಳ ಗೆಲುವು ಸಾಧಿಸುವಂತೆ ಕಾಯ್ದುಕೊಂಡರು.

ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ನಮ್ಮ ಪಕ್ಷದ ಅಭ್ಯರ್ಥಿ ನಿರಾಯಾಸವಾಗಿ ಗೆಲುವು ಸಾಧಿಸಿದ್ದಾರೆ. ಹೊಸನಗರ ಪಟ್ಟಣದ ಅಭಿವೃದ್ಧಿಗೆ ಪೂರಕವಾದ ಆಡಳಿತ ಸಿಗಲಿದೆ. ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ನಾವು ಆಮಿಷ ಒಡ್ಡಿದ್ದೇವೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ ಅದು ಸತ್ಯಕ್ಕೆ ದೂರವಾದದ್ದು. ಕಾಂಗ್ರೆಸ್ ಪಕ್ಷದ ಜನಪರ ಕಾಳಜಿಯ ಆಡಳಿತವನ್ನು ನೋಡಿ ಬಿಜೆಪಿ ಪಕ್ಷದ ಕೆಲ ಸದಸ್ಯರು ಪರೋಕ್ಷವಾಗಿ ಬೆಂಬಲಿಸಿದ್ದಾರೆ ಎಂದರು.

ಬಳಿಕ ಮಾತನಾಡಿದ ಶಾಸಕ ಬೇಳೂರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಭದ್ರ ನೆಲೆ ಕಂಡಿದೆ. ಇತ್ತೀಚಿನ ಡಿಸಿಸಿ ಬ್ಯಾಂಕ್, ಶಿಮುಲ್ ಹಾಗೂ ಕಾರ್ಗಲ್ ಪಟ್ಟಣ ಪಂಚಾಯತಿ ಚುನಾವಣೆಗಳೇ ಇದಕ್ಕೆ ಸಾಕ್ಷಿ ಎಂದರು.

ಹೊಸನಗರ ಪಟ್ಟಣದ ಸಮಗ್ರ ಅಭಿವೃದ್ಧಿಗೆ ತಾವು ಈಗಲೂ ಕಟಿಬದ್ದರಾಗಿದ್ದು ನೂತನ ಆಡಳಿತ ಸಮಿತಿ ಜೊತೆ ಚರ್ಚಿಸಿ ಪಟ್ಟಣ ಪಂಚಾಯತಿಯ ಸುಸಜ್ಜಿತ ನೂತನ ಕಟ್ಟಡ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೊಳಿಸಲು ಸರ್ಕಾರದಿಂದ ಅಗತ್ಯ ಅನುದಾನ ಬಿಡುಗಡೆಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಯಲ್ಲಿ ನೂತನ ಆಡಳಿತ ಸಮಿತಿಗೆ ನೈತಿಕ ಬೆಂಬಲ ನೀಡಲು ಸದಾಸಿದ್ದ ಇರುವುದಾಗಿ ತಿಳಿಸಿದರು.

ಪರಸ್ಪರ ಹೊಂದಾಣಿಕೆ ರಾಜಕಾರಣದಿಂದ ಮಾತ್ರವೇ ಪಕ್ಷ ಸಂಘಟನೆ ಸಾಧ್ಯ ಎಂಬುದನ್ನು ಈ ಗೆಲುವು ಪುಷ್ಠಿಕರಿಸಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್ ತಿಳಿಸಿದರು.

ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ, ಶಿಮುಲ್ ಅಧ್ಯಕ್ಷ ಗುರುಶಕ್ತಿ ವಿದ್ಯಾಧರ್, ಕಾಂಗ್ರೆಸ್ ಜಿಲ್ಲಾ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಜಿ.ಪಂ.ಮಾಜಿ ಸದಸ್ಯರಾದ ಅನಿತಾ ಕುಮಾರಿ, ಬಂಡಿ ರಾಮಚಂದ್ರ, ತಾಲೂಕು ಮಹಿಳಾ ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ, ಪ.ಪಂ.ಸದಸ್ಯರಾದ ಸಿಂಥಿಯಾ, ಶಾಹಿನಾ, ಅಶ್ವಿನಿ ಕುಮಾರ್, ಗುರುರಾಜ್, ಪ್ರಮುಖರಾದ ಹರತಾಳು ಸಾಕಮ್ಮ, ನೋರಾ ಮೆಟೆಲ್ಡಾ ಸಿಕ್ವೇರಾ, ರಾಧಿಕಾ ಶೆಟ್ಟಿ, ಗುರುರಾಜ್ ಕೆ.ಎಸ್, ಕಾರ್ಯದರ್ಶಿ ಸದಾಶಿವ, ಕರುಣಾಕರ ಶೆಟ್ಟಿ, ನಾಗೋಡಿ ವಿಶ್ವನಾಥ್, ಶಾಸಕರ ಆಪ್ತ ಕಾರ್ಯದರ್ಶಿ ಸಣ್ಣಕ್ಕಿ ಮಂಜು, ಕಳೂರು ಕೃಷ್ಣಮೂರ್ತಿ ಸೇರಿದಂತೆ ಹಲವರು ಇದ್ದರು.

Leave a Reply

Your email address will not be published. Required fields are marked *