ಕುಡುಕರ ನೆಚ್ಚಿನ ತಾಣವಾದ ಬಸ್ ನಿಲ್ದಾಣ! – ಪ್ರಯಾಣಿಕರ ಗೋಳು ಕೇಳುವವರ್ಯಾರು.!?
ರಿಪ್ಪನ್‌ಪೇಟೆ : ಇಲ್ಲಿನ ವಿನಾಯಕ ವೃತ್ತದಲ್ಲಿರುವ ಬಸ್ ನಿಲ್ದಾಣ ಪ್ರಯಾಣಿಕರ ಅನುಕೂಲಕ್ಕೆ ಬಾರದೇ ಪುಂಡ ಕುಡುಕರ ತಾಣವಾಗಿ ಮಾರ್ಪಟ್ಟು ಮಹಿಳೆಯರು , ವೃದ್ದರು ಹಾಗೂ ಶಾಲಾ ಕಾಲೇಜು ಮಕ್ಕಳು ಪರದಾಡುವಂತಾಗಿದೆ.
ಹೌದು ಮಲೆನಾಡಿನ ಅನೇಕ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕೊಂಡಿಯಾಗಿರುವ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಬಸ್ ನಿಲ್ದಾಣವಿಲ್ಲದೇ ಪ್ರಯಾಣಿಕರು ಪರದಾಡುತ್ತಿರುವು ಹಲವು ದಶಕಗಳ ಗೋಳಾಗಿದೆ.ಇನ್ನೂ ತೀರ್ಥಹಳ್ಳಿ ರಸ್ತೆ ಹಾಗೂ ಹೊಸನಗರ ರಸ್ತೆಯ ಬಸ್ ಪ್ರಯಾಣಿಕರಿಗೆ ಅನೂಕೂಲವಾಗಲೆಂದು ತಾತ್ಕಾಲಿಕ ಬಸ್ ನಿಲ್ದಾಣವನ್ನು ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಿಸಲಾಗಿತ್ತು ಆದರೆ ಆ ನಿಲ್ದಾಣವೀಗ ಕುಡುಕರ ಸ್ವರ್ಗವಾಗಿ ಮಾರ್ಪಟ್ಟಿದ್ದು ಪ್ರಯಾಣಿಕರ ಪರದಾಟ ಹೇಳತೀರದಂತಾಗಿದೆ.
ಸುಮಾರು 30 ರಿಂದ 50 ಜನರಿಗೆ ಆಸನ ವ್ಯವಸ್ಥೆಯಿರುವ ಈ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ಮಹಿಳೆಯರಿಗೆ ಅಭದ್ರತೆ ಎದುರಾಗಿದೆ. ಪುಂಡ ಪೋಕರಿಗಳು ಬಸ್ ನಿಲ್ದಾಣದಲ್ಲಿಯೇ ಮದ್ಯಪಾನ ಮಾಡಿಕೊಂಡು ತಿರುಗಾಡುತ್ತಾ ಪ್ರಯಾಣಿಕರ ಜತೆ ಅಸಭ್ಯವಾಗಿ ವರ್ತನೆ ಮಾಡುತ್ತಿದ್ದು, ಪ್ರಶ್ನಿಸುವವರು ಇಲ್ಲದಂತಾಗಿದೆ.
ಸಾರ್ವಜನಿಕರು ಎಷ್ಟೇ ಹೇಳಿದರೂ ಪಕ್ಕದಲ್ಲಿಯೇ ಇರುವ ಎರಡು ಮದ್ಯದ ಅಂಗಡಿಗಳಿಂದ ಮದ್ಯ ತರುವ ಮದ್ಯಸೇವಕರು ಬಸ್ ನಿಲ್ದಾಣದಲ್ಲಿಯೇ ಕುಡಿದು ಇಡೀ ವಾತಾವರಣ ಕಲುಷಿತ ಗೊಳಿಸುತ್ತಿದ್ದಾರೆ. ಮಹಿಳೆಯರು, ಮಕ್ಕಳು ಈ ಪ್ರದೇಶದಲ್ಲಿ ಸಂಚರಿಸಲು ಭಯ ಪಡುತ್ತಿದ್ದಾರೆ. ಪೊಲೀಸರು ಹಾಗೂ ಅಧಿಕಾರಿಗಳು ದಾಳಿ ಮಾಡಿ ಎಚ್ಚರಿಸಿದರೂ ಸಹಿತ ಕುಡುಕರು ಮಾತ್ರ ನಿತ್ಯ ಮದ್ಯ ಸೇವನೆ ನಿಲ್ಲಿಸಿಲ್ಲ. ಸ್ವಚ್ಛತೆ ಹಾಗೂ ಸಾರ್ವಜನಿಕರ ಹಿತಕಾಯಬೇಕಿದ್ದ ಗ್ರಾಮಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಬೆಳಿಗ್ಗೆ ಟೀ ಕಾಫಿ ದೊರೆಯುವುದಕ್ಕಿಂತ ಮುಂಚೆ ಮದ್ಯ ಸಿಗುತ್ತಿದೆ, ಕೆಲವು ಮಿಲ್ಟ್ರಿ ಹೊಟೇಲ್ ಗಳಲ್ಲಿ ಬೆಳಗಿನ ಜಾವದಿಂದಲೇ ಮದ್ಯ ಸರಬರಾಜು ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತಿದ್ದಾರೆ.
ಒಟ್ಟಾರೆಯಾಗಿ ರಿಪ್ಪನ್‌ಪೇಟೆ ಪಟ್ಟಣದ ಸಾರ್ವಜನಿಕರ ಬಹು ದಿನಗಳ ಬೇಡಿಕೆಯಾಗಿರುವ ಸುಸಜ್ಜಿತ ಬಸ್ ನಿಲ್ದಾಣ ಗಗನಕುಸುಮವಾಗಿಯೇ ಉಳಿದುಬಿಟ್ಟಿದೆ ಕೊನೆ ಪಕ್ಷ ಈಗಿರುವ ತಾತ್ಕಾಲಿಕ ಬಸ್ ನಿಲ್ದಾಣವನ್ನಾದರೂ ಪ್ರಯಾಣಿಕರ ಅನುಕೂಲಕ್ಕೆ ಬರುವಂತಹ ಕ್ರಮವನ್ನು ಇನ್ನಾದರೂ ಸಂಬಂಧಪಟ್ಟವರು ಕೈಗೊಳ್ಳುತ್ತಾರಾ ಕಾದು ನೊಡಬೇಕಾಗಿದೆ…..