ಯೋಧನಾಗಿ ದೇಶ ಸೇವೆ ಮಾಡುವ ಕನಸು ಕಂಡಿದ್ದ ಕಾರ್ತಿಕ್ ಬಾಳಲ್ಲಿ ವಿಧಿಯಾಟ – ಯುವ ಕ್ರೀಡಾಪಟುವಿನ ಕುಟುಂಬಕ್ಕೆ ದೊರಕುತ್ತಾ ಪರಿಹಾರ
ಯೋಧನಾಗಿ ಭಾರತ ದೇಶದ ಸೇವೆಗೈಯುವ ಕನಸು ಕಂಡಿದ್ದ ಯುವಕ ವಿಧಿಯಾಟಕ್ಕೆ ಬಲಿಯಾದ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿತ್ತು.
ಹಳಿಯೂರು ಗ್ರಾಮದ ಬಡ ಕೂಲಿ ಕಾರ್ಮಿಕ ಶಂಕರಪ್ಪ ರವರ ಪುತ್ರ ಕಾರ್ತಿಕ್ ಎಸ್ (19) ಮೃತಪಟ್ಟ ದುರ್ಧೈವಿಯಾಗಿದ್ದಾರೆ. ಯೋಧನಾಗಬೇಕು ಎಂದು ಕನಸು ಕಂಡಿದ್ದ ಕಾರ್ತಿಕ್ ಬಾಳಲ್ಲಿ ವಿಧಿಯಾಟವೇ ಬೇರೆಯಾಗಿತ್ತು.
ಮೃತ ಕಾರ್ತಿಕ್ ರಿಪ್ಪನ್‌ಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಬಿಎ ಯಲ್ಲಿ ದ್ವಿತೀಯ ಸೆಮಿಸ್ಟರ್ ವ್ಯಾಸಾಂಗ ಮಾಡುತಿದ್ದು ಉಪನ್ಯಾಸಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿದ್ದನು. ಕ್ರೀಡೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದ ಕಾರ್ತಿಕ್ ಹಾಕಿ, ವಾಲಿಬಾಲ್ , ಕ್ರಿಕೆಟ್ ಹಾಗೂ ಕಬ್ಬಡಿ ಆಟಗಾರನಾಗಿದ್ದನು. ಹಾಕಿ ಕ್ರೀಡೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದನು.
ಹೊಸನಗರ ತಾಲೂಕಿನಲ್ಲಿ ಯಾವುದೇ ಕ್ರೀಡಾಕೂಟವಿದ್ದರೂ ಯುವಕರನ್ನು ಒಟ್ಟುಗೂಡಿಸಿ ತಂಡವನ್ನು ಕಟ್ಟಿಕೊಂಡು ಪಂದ್ಯಾವಳಿಯಲ್ಲಿ ಭಾಗಿಯಾಗುತಿದ್ದ ಕಾರ್ತಿಕ್ ಇನ್ನು ನೆನಪು ಮಾತ್ರ…..
ಹಳಿಯೂರು ಗ್ರಾಮದ ಶಂಕರಪ್ಪ ಹಾಗೂ ಅನಿತಾ ದಂಪತಿಗಳಿಗೆ ಕಾರ್ತಿಕ್ ಹಾಗೂ ಸಂಜನಾ ಎಂಬ ಇಬ್ಬರು ಮಕ್ಕಳಿದ್ದು ಈಗ ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡು ಬಡ ಕುಟುಂಬ ಅನಾಥವಾಗಿದೆ.
ತನ್ನದಲ್ಲದ ತಪ್ಪಿಗೆ ಅನ್ಯಾಯವಾಗಿ ಜೀವ ಕಳೆದುಕೊಂಡ ಯುವ ಕ್ರೀಡಾಪಟು ಕಾರ್ತಿಕ್ ಕುಟುಂಬಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದವರು ಪರಿಹಾರ ದೊರಕಿಸುವ ಮೂಲಕ ಆತ್ಮಸ್ಥೈರ್ಯ ತುಂಬಬೇಕಾಗಿದೆ.
ಶುಕ್ರವಾರ ಬೆಳಗಿನಜಾವ ನಡೆದಿದ್ದೇನು..???
ಶುಕ್ರವಾರ ಬೆಳಗಿನಜಾವ ಸುಮಾರು 5 ಗಂಟೆಯ ಸಮಯದಲ್ಲಿ ಹಳಿಯೂರಿನ ತಮ್ಮ ಮನೆ ಮುಂಭಾಗದಲ್ಲಿ ಮೂತ್ರ ವಿಸರ್ಜನೆಗೆಂದು ಹೊರಬಂದ ಕಾರ್ತಿಕ್ ಸ್ವಲ್ಪ ಸಮಯದಲ್ಲಿ ಜೋರಾಗಿ ಕೂಗಿಕೊಂಡಿದ್ದಾನೆ ಈ ಸಂಧರ್ಭದಲ್ಲಿ ತಂದೆ ಶಂಕರಪ್ಪ ಹೊರಗೆ ಬಂದು ನೋಡಿದಾಗ ಮನೆಗೆ ಸಂಪರ್ಕವಿದ್ದ ವಿದ್ಯುತ್ ಲೈನ್ ತುಂಡಾಗಿ ಬೇಲಿ ಮೇಲೆ ಬಿದ್ದಿದ್ದು, ಮಗ ಕಾರ್ತಿಕ್ ಬೇಲಿ ಮೇಲೆ ಬಿದ್ದಿದ್ದನ್ನು ಗಮನಿಸಿ ಮನೆ ಪಕ್ಕದಲ್ಲಿದ್ದ ಟಿಸಿ ಬಳಿ ಓಡಿಹೋಗಿ ಸ್ವಿಚ್ ನ್ನು ಆಫ್ ಮಾಡಿ ಬಂದು ಕಾರ್ತಿಕ್ ನನ್ನು ಮೇಲಕ್ಕೆತ್ತಿ ವಿಚಾರಿಸಿದಾಗ ಮೂತ್ರ ವಿಸರ್ಜನೆ ಮಾಡುವಾಗ ಕರೆಂಟ್ ಶಾಕ್ ಆಗಿದೆ ಎಂದು ಯುವಕ ಹೇಳಿ ಪ್ರಜ್ಞೆ ತಪ್ಪಿದ್ದಾನೆ.
ಕೂಡಲೇ ಪಕ್ಕದ ಮನೆಯವರ ಕಾರಿನಲ್ಲಿ ಕಾರ್ತಿಕ್ ನನ್ನು ರಿಪ್ಪನ್‌ಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಶಿವಮೊಗ್ಗಕ್ಕೆ ಕರೆದೊಯ್ಯಲಾಯಿತು ಆದರೆ ಅಷ್ಟರಲ್ಲಾಗಲೇ ಕಾರ್ತಿಕ್ ನ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಮೆಸ್ಕಾಂ ಇಲಾಖೆ ಮೃತ ಕಾರ್ತಿಕ್ ಕುಟುಂಬಕ್ಕೆ ಇಲ್ಲಿಯವರೆಗೂ ಯಾವುದೇ ರೀತಿಯ ಪರಿಹಾರ ನೀಡದೇ ನಿರ್ಲಕ್ಷ್ಯ ವಹಿಸಿದೆ ಹಾಗೇಯೆ ಚುನಾವಣೆ ಸಂಧರ್ಭದಲ್ಲಿ ನಾ ಮುಂದು ತಾ ಮುಂದು ಎಂದು ಓಡೋಡಿ ಬಂದು ಪರಿಹಾರ ಕೊಟ್ಟು ಪೋಟೋ ಶೂಟ್ ಮಾಡಿಸುವ ಜನಪ್ರತಿನಿಧಿಗಳು ಕೂಡ ನಾಪತ್ತೆಯಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಯಿಂದ ಆ ಬಡ ಕುಟುಂಬಕ್ಕೆ ಪರಿಹಾರ ದೊರಕುತ್ತಾ ಕಾದುನೋಡಬೇಕಾಗಿದೆ…!!!