Ripponpete | ಶಂಕಿತ ಡೆಂಗ್ಯೂ ಗೆ ಇಬ್ಬರು ಬಲಿ – ಪಟ್ಟಣಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ , ಪರಿಶೀಲನೆ

Ripponpete | ಶಂಕಿತ ಡೆಂಗ್ಯೂ ಗೆ ಇಬ್ಬರು ಬಲಿ – ಪಟ್ಟಣಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಭೇಟಿ , ಪರಿಶೀಲನೆ 

ರಿಪ್ಪನ್‌ಪೇಟೆ : ಪಟ್ಟಣದ ವ್ಯಾಪ್ತಿಯಲ್ಲಿ ಶಂಕಿತ ಡೆಂಗ್ಯೂ ಗೆ ಒಂದೇ ವಾರದಲ್ಲಿ ಇಬ್ಬರು ಬಲಿಯಾಗಿರುವ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಲ್ಯಾಣ ಅಧಿಕಾರಿ(DHO) ಡಾ ನಟರಾಜ್ ಕೆ ಎನ್ ಪಟ್ಟಣದ ಡೆಂಗ್ಯೂ ಭಾದಿತ ಪ್ರದೇಶ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.


ಪಟ್ಟಣದ ಆರೋಗ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಸಭೆ ನಡೆಸಿ ರಿಪ್ಪನ್‌ಪೇಟೆಯ ಎಲ್ಲಾ ವಾರ್ಡ್ ಗಳಲ್ಲಿ ಪ್ರತಿನಿತ್ಯ ಫಾಗಿಂಗ್ ನಡೆಸುವಂತೆ ಸೂಚನೆ ನೀಡಿದ್ದಾರೆ. ನಂತ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಗ್ರಾಮಾಡಳಿತಕ್ಕೆ ಸೂಚಿಸಿದ್ದಾರೆ.

ನಂತರ ಮಾತನಾಡಿ ಡೆಂಗ್ಯೂ ಹಾವಳಿ ತಡೆಗೆ ಈಗಾಗಲೇ ಆರೋಗ್ಯ ಇಲಾಖೆ ಹಾಗೂ ಗ್ರಾಮಾಡಳಿತ ಅವಿರತವಾಗಿ ಶ್ರಮಿಸುತ್ತಿದೆ. ಪ್ರತಿ ವಾರ್ಡ್​ಗೆ ಫಾಗಿಂಗ್ ಮಷಿನ್ ಮೂಲಕ ಫಾಗಿಂಗ್ ಮಾಡಲಾಗುತ್ತಿದೆ.‌ ಇದರ ಮಧ್ಯೆ ಸಾರ್ವಜನಿಕರು ಕೂಡ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕು, ಮನೆಯ ಮುಂದೆ, ಮನೆಯ ಮೇಲೆ, ಮನೆಯ ಸುತ್ತ ಎಸೆಯಲಾದ ತೆಂಗಿನ ಚಿಪ್ಪು, ಟಯರ್, ಮುರಿದ ಬಕೆಟ್ ಸೇರಿದಂತೆ ಇತರೇ ಧೀರ್ಘ ದಿನಗಳ ಕಾಲ ನೀರು ಸಂಗ್ರಹವಾಗುವ ಘನ ತ್ಯಾಜ್ಯಗಳನ್ನು ಇಟ್ಟಿದ್ದರೆ ಈಡೀಸ್ ಎಂಬ ಸೊಳ್ಳೆಗಳು ಉದ್ಭವಾಗುತ್ತವೆ. ಈ ಸೊಳ್ಳೆಗಳು ಕಚ್ಚಿದರೆ ಡೆಂಘೀ ಜ್ವರ ಆವರಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಹಾಗಾಗಿ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಘನ ತ್ಯಾಜ್ಯಗಳಲ್ಲಿ ನೀರು ಸಂಗ್ರಹವಾಗದಂತೆ, ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಚಿಕ್ಕ ಮಕ್ಕಳು, ವೃದ್ಧರು, ಬಾಣಂತಿಯರು, ಗರ್ಭಿಣಿಯರು ಮೈ ಮುಚ್ಚುವ ಬಟ್ಟೆಗಳನ್ನು ಧರಿಸುವುದು, ಹಗಲು ಮತ್ತು ರಾತ್ರಿ ಮಲಗುವಾಗ ತಪ್ಪದೇ ಸೊಳ್ಳೆ ಪರದೆ ಬಳಸುವುದರಿಂದ ಡೆಂಘೀ ತಡೆಗಟ್ಟಬಹುದೆಂದು ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಜುಲೈ 09 ರಂದು ರಿಪ್ಪನ್‌ಪೇಟೆಯ ಹೊಸನಗರ ರಸ್ತೆಯ ರಶ್ಮಿ ನಾಯಕ್ ಎಂಬುವವರು ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದರು, ಘಟನೆ ನಡೆದು ಒಂದು ವಾರದೊಳಗೆ ಹೊಸನಗರ ರಸ್ತೆಯ ಯುವಕ ಆಶೀಕ್ ರಸೂಲ್ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಡೆಂಗ್ಯೂ ಬಾಧಿತ ರೋಗಿಗಳು ಶಿವಮೊಗ್ಗ, ಸಾಗರ ಮತ್ತು ತೀರ್ಥಹಳ್ಳಿಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.ಈ ಘಟನೆಗಳು ಪಟ್ಟಣದ ನಾಗರೀಕರಲ್ಲಿ ಭಯ ಹುಟ್ಟಿಸಿದೆ.

ಒಟ್ಟಾರೆಯಾಗಿ ಪಟ್ಟಣದ ವ್ಯಾಪ್ತಿಯಲ್ಲಿ ಡೆಂಗ್ಯೂ ಭೀತಿ ಕಳೆದ ಒಂದೂವರೆ ತಿಂಗಳುಗಳಿಂದ ಇದ್ದು ಹಲವಾರು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು ಸಹ ನಿರ್ಲಕ್ಷ್ಯವಹಿಸಿದ ಪರಿಣಾಮ ಇಂದು ಡೆಂಗ್ಯೂ ರಣ ಕೇಕೆ ಹಾಕುತ್ತಿದೆ, 

ಡೆಂಗ್ಯೂ ಪತ್ತೆಯಾದಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖೆಗಳು ಕೈಗೊಂಡಿದ್ದರೆ ಪಟ್ಟಣ ಎರಡು ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಬಹುದಿತ್ತು……..!!!

Leave a Reply

Your email address will not be published. Required fields are marked *