ವಿದ್ಯಾರ್ಥಿಗಳು ಕ್ರೀಡೆ ಸೇರಿದಂತೆ ಬಹುಮುಖ ಪ್ರತಿಭೆಗಳಿಂದ ಸಾಧನೆ ಮಾಡಬೇಕು – ಕೂಡೋ ವಿಶ್ವ ಚಾಂಪಿಯನ್ ಸನ್‌ಸೈ ನೊರಿಹಿದೆ ತೆರಗುಚ್ಚಿ
ರಾಮಕೃಷ್ಣ ವಿದ್ಯಾಲಯದಲ್ಲಿ ಅಲ್ ಇಂಡಿಯಾ ಕೂಡೋ ಸೆಮಿನಾರ್ -2024
ವಿದ್ಯಾರ್ಥಿಗಳು ಆರೋಗ್ಯವಂತರಾಗಿ ಸದೃಢ ಮನಸ್ಸು ಹೊಂದಿರುವ ಮೂಲಕ ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲೂ ಭಾಗವಹಿಸಿ ತಮ್ಮಲ್ಲಿನ ಪ್ರತಿಭೆ ಹೊರಹಾಕಬೇಕು ಎಂದು ಕೂಡೋ ವರ್ಲ್ಡ್ ಚಾಂಪಿಯನ್ ಗೋಲ್ಡ್‌ಮೆಡಲಿಸ್ಟ್ ಜಪಾನಿನ ಸನ್‌ಸೈ ನೊರಿಹಿದೆ ತೆರಗುಚ್ಚಿ ಕರೆ ನೀಡಿದರು.
ಶಿವಮೊಗ್ಗ ಜಿಲ್ಲೆಯ ಸಾಗರದ ಎಂ.ಎಲ್.ಹಳ್ಳಿಯಲ್ಲಿನ ಶ್ರೀರಾಮಕೃಷ್ಣ ವಸತಿ ವಿದ್ಯಾಲಯದ ಸಭಾಂಗಣದಲ್ಲಿ ಆಯೋಜಿಸಿದ್ದ ಆಲ್ ಇಂಡಿಯಾ ಕೂಡೋ ಟ್ರೈನಿಂಗ್ ಸೆಮಿನಾರ್-೨೦೨೪ ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಕ್ರೀಡೆಗಳು ಮನುಷ್ಯನ ಎಲ್ಲಾ ಅಂಗಾಂಗಳ ಚಲನೆಗೆ ಕಾರಣವಾಗುತ್ತವೆ.ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಕ್ರೀಡೆ ಅತ್ಯಂತ ಪರಿಣಾಮಕಾರಿಯಾಗಿದೆ.ಆರೋಗ್ಯವಂತ ಜೀವನಕ್ಕೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅತಿಮುಖ್ಯವಾಗುತ್ತವೆ.ಆರೋಗ್ಯದಿಂದ ಮಾತ್ರ ಜೀವನದ ವಿವಿಧ ರಂಗಗಳಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಪ್ರತಿ ನಿತ್ಯ ಸಮಯ ವ್ಯರ್ಥ ಮಾಡದೇ ಕ್ರೀಡೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಶತತ ಅಭ್ಯಾಸ ಮಾಡಬೇಕು.ಕಠಿಣ ಪರಿಶ್ರಮದ ಪರಿಣಾಮ ನಾನು ಇಂದು ಅಂತರಾಷ್ಟ್ರೀಯ ಕೂಡೋ ಚಾಂಪಿಯನ್‌ನಲ್ಲಿ ಗೋಲ್ಡ್‌ಮೆಡಲ್ ಪಡೆಯಲು ಸಾಧ್ಯವಾಗಿದೆ.ನೀವು ನನಗಿಂತ ಹೆಚ್ಚಿನ ಸಾಧನೆ ಮಾಡಲು ಉತ್ತಮ ಅವಕಾಶವಿರುವ ಕಾರಣ ವಿದ್ಯಾರ್ಥಿ ದಿಶೆಯಲ್ಲಿಯೇ ಬಹುಮುಖ ಪ್ರತಿಭೆಗಳಲ್ಲಿ ಸಾಧನೆ ಮಾಡುವಂತೆ ಸಲಹೆ ನೀಡಿದರು.
ವೇದಿಕೆಯಲ್ಲಿ ಗುಜರಾತ್ ರಾಜ್ಯದ ಕೂಡೋ ಅಸೋಷಿಯೇಷನ್ ಡೈರೆಕ್ಟರ್ ಪಿಯಾಂಕಾ ರಾಣಾ ಮಾತನಾಡಿ ಕೂಡೋ ಕ್ರೀಡೆಯಲ್ಲಿ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಲು ಅವಕಾಶ ಮಾಡಿಕೊಟ್ಟಿರುವ ಸಂಸ್ಥೆಯ ಮುಖ್ಯಸ್ಥಾರಾದ ದೇವರಾಜ್ ಹಾಗೂ ಎಲ್ಲಾ ಶಿಕ್ಷಕ ವೃಂದದವರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಮಕೃಷ್ಣ ವಿದ್ಯಾಲಯದ ಸಂಸ್ಥಾಪಕರಾದ ದೇವರಾಜ್ ಅವರು ಮಾತನಾಡಿ ಕ್ರೀಡೆ ದೇಶ ವಿದೇಶಗಳ ಜನರನ್ನು ಬೆಸೆಯುವ ಕೆಲಸವನ್ನು ಮಾಡುತ್ತದೆ.ಜಪಾನಿನ ಕ್ರೀಡಾ ಸಾಧಕರಾದ ಕೂಡೋ ವರ್ಲ್ಡ್ ಚಾಂಪಿಯನ್ ಗೋಲ್ಡ್‌ಮೆಡಲಿಸ್ಟ್ ಸನ್‌ಸೈ ನೊರಿಹಿದೆ ತೆರಗುಚ್ಚಿ ಭಾರತದಲ್ಲಿನ ರಾಜ್ಯ ಕರ್ನಾಟಕದ ಗುಡ್ಡಗಾಡು ಪ್ರದೇಶ ಸಾಗರಕ್ಕೆ ಆಗಮಿಸಿ ನಮ್ಮ ವಿದ್ಯಾರ್ಥಿಗಳಿಗೆ ಕೂಡೋ ಆಸಕ್ತಿ ಬೆಳೆಸುವಲ್ಲಿ ಮಹತ್ವದ ಪಾತ್ರವಹಿಸಿರುವುದು ಹೆಚ್ಚು ಪ್ರೇರಣೆಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕರ್ನಾಟಕದ ಕೂಡೋ ಅಸೋಷಿಯೇಷನ್ ಅಧ್ಯಕ್ಷ ರೆನ್ಸಿ ಸಬ್ಬೀರ್ ಅಹ್ಮದ್ ಮಾತನಾಡಿ ವಿದ್ಯಾರ್ಥಿ ಜೀವನದ ಯಶಸ್ವಿಗೆ ಉತ್ತಮ ಆರೋಗ್ಯ ಮುಖ್ಯ.ಆರೋಗ್ಯವಂತ ಮನುಷ್ಯನಿಂದ ಮಾತ್ರ ಯಾವುದೇ ಸಾಧನೆ ಮಾಡಲು ಸಾಧ್ಯ.ಆದ್ದರಿಂದ ಕೂಡೋ ಕ್ರೀಡೆ ವಿದ್ಯಾರ್ಥಿಗಳಲ್ಲಿ ಸಂಯಮ ರೂಡಿಸುವ ಜೊತೆಗೆ ಆತ್ಮವಿಶ್ವಾಸವನ್ನು ವೃದ್ದಿಸುತ್ತದೆ.ತರಬೇತು ಪಡೆದು ಉತ್ತಮ ಸಾಧನೆಗೆ ಜಪಾನಿನ ಸನ್‌ಸೈ ನೊರಿಹಿದೆ ತೆರಗುಚ್ಚಿ ನಿಮಗೆ ಆದರ್ಶವಾಗುತ್ತಾರೆ ಎಂದರು.
ರಾಮಕೃಷ್ಣ ವಿದ್ಯಾಲಯದ ಮುಖ್ಯ ಶಿಕ್ಷಕರಾದ ಸರಿತಾ ದೇವರಾಜ್ ಸ್ವಾಗತಿಸಿ,ಶಿಕ್ಷಕಿ ಅಪೂರ್ವ ಕಾರ್ಯಕ್ರಮ ನಿರ್ವಹಿಸಿದರು.ಹಿರಿಯ ಶಿಕ್ಷಕರಾದ ಹುಚ್ಚಪ್ಪ ಸರ್ವರನ್ನು ವಂದಿಸಿದರು.ಪ್ರಾರಂಭದಲ್ಲಿ ವಿದ್ಯಾರ್ಥಿಗಳು ಪ್ರಾರ್ಥಿಸಿದರು.
ಕೂಡೋ ವರ್ಲ್ಡ್ ಚಾಂಪಿಯನ್ ಗೋಲ್ಡ್‌ಮೆಡಲಿಸ್ಟ್ ಜಪಾನಿನ ಸನ್‌ಸೈ ನೊರಿಹಿದೆ ತೆರಗುಚ್ಚಿ ಮತ್ತು ಗುಜರಾತ್ ರಾಜ್ಯದ ಕೂಡೋ ಅಸೋಷಿಯೇಷನ್ ಡೈರೆಕ್ಟರ್ ಪಿಯಾಂಕಾ ರಾಣಾ ಹಾಗೂ ಕರ್ನಾಟಕದ ಕೂಡೋ ಅಸೋಷಿಯೇಷನ್ ಅಧ್ಯಕ್ಷ ರೆನ್ಸಿ ಸಬ್ಬೀರ್ ಅಹ್ಮದ್ ಅವರುಗಳು ರಾಮಕೃಷ್ಣ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಕೂಡೋ ತರಬೇತು ನೀಡಿ ಸಾಮೂಹಿಕ ಪ್ರದರ್ಶನ ನೀಡಿದರು.