ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸಬೇಕು : ಕರಿಬಸಮ್ಮ
ರಿಪ್ಪನ್ ಪೇಟೆ : ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ಕುಟುಂಬದ ಹಿರಿಯರು ಮೊದಲ ಆದ್ಯತೆ ನೀಡಬೇಕು. ಪೌಷ್ಟಿಕ ಆಹಾರ ಸೇವಿಸುವುದರಿಂದ ಗರ್ಭಿಣಿಯರು ಮತ್ತು ಹುಟ್ಟುವಂತಹ ಮಗುವಿಗೆ ಪೌಷ್ಟಿಕಾಂಶತೆ ಸಿಗುತ್ತದೆ ಹಾಗೂ ಮಗುವಿನ ಬೆಳವಣಿಗೆಯಲ್ಲಿ ಪೌಷ್ಟಿಕಾಂಶತೆ ಬಹಳ ಮುಖ್ಯ ಎಂದು ಹೊಸನಗರ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕರಿ ಬಸಮ್ಮ ಹೇಳಿದರು.
ರಿಪ್ಪನ್ ಪೇಟೆ ರೋಟರಿ ಕ್ಲಬ್ ಹಾಗೂ ಕೆಂಚನಾಲ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಕೆಂಚನಾಲ ಗ್ರಾಮ ಪಂಚಾಯಿತಿಯ ಸಭಾಭವನದಲ್ಲಿ ಆಯೋಜಿಸಲಾಗಿದ್ದ ತಾಯಿ ಮತ್ತು ಮಕ್ಕಳ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು ಗರ್ಭಿಣಿಯರು ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸಿದಲ್ಲಿ ಹುಟ್ಟುವಂತಹ ಮಗುವಿಗೆ ಉತ್ತಮ ಆರೋಗ್ಯವನ್ನು ನೀಡಬಹುದು. ಹೆಚ್ಚಿನ ಗರ್ಭಿಣಿಯರು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಾರೆ ಮತ್ತು ರಕ್ತಹೀನತೆಯು ಅವರಲ್ಲಿ ಇರುತ್ತದೆ ಇದು ಮಗುವಿನ ಮೇಲೆ ಪ್ರಭಾವ ಬೀರುತ್ತವೆ . ಗರ್ಭಿಣಿಯರು ಪೌಷ್ಟಿಕಾಂಶದ ಆಹಾರ ಸೇವಿಸುವುದರಿಂದ ಹುಟ್ಟುವಂತ ಮಗುವು ಆರೋಗ್ಯ ಹೊಂದಿರುತ್ತದೆ, ಬೇರೆಯಲ್ಲ ಪೌಷ್ಟಿಕ ಆಹಾರಗಳಿಗಿಂತ ತಾಯಿಯ ಎದೆ ಹಾಲು ಹುಟ್ಟುವ ಮಕ್ಕಳಿಗೆ ಅತ್ಯುತ್ತಮವಾದ ಆಹಾರವಾಗಿದ್ದು ಮಗುವಿನ ಬೆಳವಣಿಗೆಗೆ ಬೇಕಾಗಿರುವ ಎಲ್ಲಾ ಪೌಷ್ಟಿಕ ಅಂಶವು ಎದೆಯ ಹಾಲಿನಲ್ಲಿರುತ್ತದೆ. ತಾಯಿಯ ಎದೆ ಹಾಲು ಮಗುವಿಗೆ ಅಮೃತಕ್ಕೆ ಸಮಾನವಾದ ಆಹಾರವಾಗಿದೆ,ಸತತ ಎರಡು ವರ್ಷ ಎದೆ ಹಾಲನ್ನು ನೀಡಬಹುದು ಎಂದರು.
ಕಾರ್ಯಕ್ರಮದಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಹಾಗೂ ಜಾಗೃತಿಯ ಬಗ್ಗೆ ಮಾತನಾಡಿಹೊಸನಗರ ತಾಲೂಕಿನಲ್ಲಿ ಡೆಂಗ್ಯೂ ಜ್ವರದ ಪರಿಣಾಮವಾಗಿ ಇಬ್ಬರು ಮೃತಪಟ್ಟಿದ್ದು ವಿಷಾದದ ಸಂಗತಿಯಾಗಿದೆ, ಪ್ರತಿಯೊಬ್ಬರೂ ಆರೋಗ್ಯದ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು, ಮನೆಗಳ ಸುತ್ತಮುತ್ತ ತ್ಯಾಜ್ಯ ವಸ್ತುಗಳು ಹಾಗೂ ನೀರು ಸಂಗ್ರವಾಗಿದ್ದರೆ ಸೊಳ್ಳೆಗಳು ಉತ್ಪನ್ನವಾಗಿ ವಿವಿಧ ರೀತಿಯ ಸಾಂಕ್ರಾಮಿಕ ರೋಗಗಳೊಂದಿಗೆ ಡೆಂಗ್ಯೂ ಜ್ವರಕ್ಕೆ ಕಾರಣವಾಗುತ್ತದೆ, ಪ್ರತಿಯೊಬ್ಬರೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು, ಇದರಿಂದ ಆರೋಗ್ಯದ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು ಎಂದರು.
ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಬೇದುಲ್ಲಾ ಶರೀಫ್ ಮಾತನಾಡಿ ರೋಟರಿ ಸಂಸ್ಥೆಯವರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ.ತಾಯಿ ಮತ್ತು ಮಗುವಿನ ಆರೋಗ್ಯ ಕಾರ್ಯಕ್ರಮ ಗ್ರಾಮಾಂತರ ಪ್ರದೇಶದಲ್ಲಿ ಆಯೋಜನೆ ಮಾಡಿರುವುದು ಸಂತಸ ತಂದಿದೆ , ಡೆಂಗ್ಯೂ ಜ್ವರದಂತಹ ಸಂಕಷ್ಟದ ಸಮಯದಲ್ಲಿ ಆರೋಗ್ಯ ರಕ್ಷಣೆಯ ಕುರಿತು ವೈದ್ಯರುಗಳು ಮತ್ತು ಆರೋಗ್ಯ ಇಲಾಖೆಯವರು ಮತ್ತು ಆಶಾ ಕಾರ್ಯಕರ್ತೆಯರು ನೀಡಿದ ಸಲಹೆ ಸೂಚನೆಗಳನ್ನು ಪಾಲನೆ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಜನರ ಆರೋಗ್ಯದ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ, ಆರೋಗ್ಯ ರಕ್ಷಣೆಯ ಕಾರ್ಯಕ್ರಮಗಳಿಗೆ ಪ್ರತಿ ವರ್ಷ ಅನುವು ಮಾಡಿ ಕೊಡುತ್ತಿರುವ ಕೆಂಚನಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಉಬೇದುಲ್ಲಾ ಷರೀಫ್ ರವರನ್ನು ರೋಟರಿ ಕ್ಲಬ್ ವತಿಯಿಂದ ಗೌರವಿಸಿದರು
ಸಭೆಯ ಅಧ್ಯಕ್ಷತೆಯನ್ನು ರೊಟರಿ ಅಧ್ಯಕ್ಷರಾದ ರೊ. ರಾಮಚಂದ್ರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕೆಂಚನಾಲ ಗ್ರಾಮ ಪಂಚಾಯಿತಿ ಸದಸ್ಯರಾದ ಮೊಹಮ್ಮದ್ ಶರೀಫ್, ಕೃಷ್ಣ ಜಿ ರಾವ್, ರೋಟರಿ ಸಂಸ್ಥೆಯ ಪದಾಧಿಕಾರಿಗಳಾದ ರಾಧಾಕೃಷ್ಣ ಜೆ, ಎಂ.ಬಿ ಲಕ್ಷ್ಮಣಗೌಡ,ಗಣೇಶ್. ಆರ್. ತಾನಾರಾಮ್,ರವೀಂದ್ರ ಬಲ್ಲಾಳ್, ಶಿವಕುಮಾರ್ ಶೆಟ್ಟಿ, ಎಚ್.ಎ ರಾಧಾಕೃಷ್ಣ, ಗಣೇಶ್ ಕಾಮತ್, ಸಾಜಿ ಜೇಕಬ್, ಡಾಾಕಪ್ಪ,ಕಾರ್ಯದರ್ಶಿ ಸಬಾಸ್ಟಿನ್ ಮ್ಯಾಥ್ಯೂಸ್, ಇನ್ನಿತರರಿದ್ದರು