ಹೆಂಚು ಹಾಕುವಾಗ ಕೆಳಗೆ ಬಿದ್ದು ಯುವಕ ಸಾವು – ಗುತ್ತಿಗೆದಾರ ಹಾಗೂ ಮನೆ ಮಾಲೀಕನ ವಿರುದ್ದ ದೂರು
ನ್ಯಾಮತಿ : ಇಲ್ಲಿನ ಸುರಹೊನ್ನೆ ಗ್ರಾಮದ ಮನೆಯ ಮುಂಭಾಗ ಹೆಂಚು ಹಾಕುತ್ತಿರುವಾಗ ಆಕಸ್ಮಿಕವಾಗಿ ಕೆಳಗೆ ಬಿದ್ದು ಯುವಕ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಶಿವಮೊಗ್ಗ ತಾಲ್ಲೂಕಿನ ಅನುಪಿನಕಟ್ಟೆ ಗ್ರಾಮದ ಯೋಗೇಶನಾಯ್ಕ (23) ಮೃತ ಯುವಕ.ಸುರಹೊನ್ನೆ ಗ್ರಾಮದ ಪ್ರಸನ್ನಕುಮಾರ ಅವರ ಮನೆ ಮುಂಭಾಗದಲ್ಲಿ ಹೆಂಚು ಹಾಕುವಾಗ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ.
ತಲೆಗೆ, ಮೈಕೈಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ನನ್ನ ಮಗನ ಸಾವಿಗೆ ಕಾರಣರಾದ ಗುತ್ತಿಗೆದಾರ ಅನುಪಿನಕಟ್ಟೆ ಗ್ರಾಮದ ಸಂದೀಪನಾಯ್ಕ ಮತ್ತು ಮನೆಯ ಮಾಲೀಕ ಪ್ರಸನ್ನಕುಮಾರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಯುವಕನ ತಾಯಿ ಉಮಾಬಾಯಿ ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದಾರೆ.
ನ್ಯಾಮತಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಎಸ್.ರವಿ ತನಿಖೆ ಕೈಗೊಂಡಿದ್ದಾರೆ.