ಅಳತೆಯಲ್ಲಿ ಗ್ರಾಹಕರಿಗೆ ಮೋಸ – ಬಂಕ್ ಮುಟ್ಟುಗೋಲು | Bunk confiscation

ಅಳತೆಯಲ್ಲಿ ಗ್ರಾಹಕರಿಗೆ ಮೋಸ – ಬಂಕ್ ಮುಟ್ಟುಗೋಲು | Bunk confiscation

SAGARA | ಅಳತೆಯಲ್ಲಿ ಗ್ರಾಹಕರಿಗೆ ವಂಚಿಸಲು ಕಾನೂನುಮಾಪನ ಇಲಾಖೆಯ ಸೀಲ್‌ನ್ನು ಹಾಳು ಮಾಡಿದ ಹಿನ್ನೆಲೆಯಲ್ಲಿ ನಗರದ ಆವಿನಹಳ್ಳಿ ರಸ್ತೆಯ ಗ್ಯಾಸ್‌ ಬಂಕ್‌ನ್ನು ಕಾನೂನು ಮಾಪನ ಶಾಸ್ತ್ರ ಇಲಾಖೆ ಮುಟ್ಟುಗೋಲು ಹಾಕಿಕೊಂಡಿರುವ ಘಟನೆ ನಡೆದಿದೆ.

ಗೋಗ್ಯಾಸ್‌ ಎಲ್‌ಪಿಜಿ ಕಂಪೆನಿಯ ಮಾಲೀಕತ್ವದ ಸ್ಥಳೀಯ ಶಾಖಾ ಘಟಕವನ್ನು ಶಿವಮೊಗ್ಗದ ಎಂ.ಆರ್‌.ಮಹೇಶ್ವರಪ್ಪ ಎಂಬುವವರಿಗೆ ನಡೆಸಲು ಗುತ್ತಿಗೆ ನೀಡಲಾಗಿತ್ತು.

ಘಟಕದಲ್ಲಿನ ಮದರ್‌ ಬೋರ್ಡ್‌ ಅನ್ನು ಅಳತೆಯ ನಿಖರತೆ ಕಾಪಾಡುವ ಸಲುವಾಗಿ ನಿಯಮಿತ ಅವಧಿಯವರೆಗೆ ಕಾನೂನು ಮಾಪನ ಶಾಸ್ತ್ರ ಇಲಾಖೆ ಪರಿಶೀಲನೆ ನಡೆಸಿ ಅದನ್ನು ಶೀಲ್‌ ಮಾಡುವ ನಿಯಮ ಚಾಲ್ತಿಯಲ್ಲಿದೆ. ಮಹೇಶ್ವರಪ್ಪ ಅವರು ಅಳತೆಯಲ್ಲಿ ಗ್ರಾಹಕರಿಗೆ ವಂಚಿಸುವ ಉದ್ದೇಶದಿಂದ ಈ ಶೀಲ್‌ನ್ನು ಒಡೆದು ಪ್ರತ್ಯೇಕ ಮದರ್‌ ಬೋರ್ಡ್‌ ಅಳವಡಿಸಿರುವುದು ಕಂಪೆನಿಯ ಗಮನಕ್ಕೆ ಬಂದಿತ್ತು.

ಜು.5ರಂದು ಗೋಗ್ಯಾಸ್‌ ಕಂಪೆನಿಯ ವಿಚಕ್ಷಣ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಕಾನೂನುಬಾಹಿರ ಕೃತ್ಯ ಬೆಳಕಿಗೆ ಬಂದಿದೆ.

ಈ ವೇಳೆ ಮಹೇಶ್ವರಪ್ಪ ಸ್ಥಳದಿಂದ ಪರಾರಿಯಾಗಿದ್ದಾರೆ. ಗೋಗ್ಯಾಸ್‌ ಕಂಪೆನಿ ಈ ಸಂಬಂಧ ಶಿವಮೊಗ್ಗದ ಕಾನೂನು ಮಾಪನ ಶಾಸ್ತ್ರ ಇಲಾಖೆಗೆ ದೂರು ನೀಡಿದ್ದು ಬುಧವಾರ ಸ್ಥಳಕ್ಕೆ ಆಗಮಿಸಿದ ಇಲಾಖೆಯ ಸಹಾಯಕ ನಿಯಂತ್ರಕ ರಾಜು ಎಚ್‌.ಎಸ್‌. ಹಾಗೂ ಸಿಬ್ಬಂದಿ ವರ್ಗದವರು ಮಹಜರ್‌ ಕ್ರಮ ಜರುಗಿಸಿ ಬಂಕ್‌ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಗ್ರಾಹಕರಿಗೆ ವಂಚಿಸಿದ ಆರೋಪದ ಮೇರೆಗೆ ಎಂ.ಆರ್‌. ಮಹೇಶ್ವರಪ್ಪ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಕಾನೂನು ಮಾಪನ ಕಾಯ್ದೆ ಕಲಂ 26 ರಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *