ನಾಳೆ(30-07-2024) ಇತಿಹಾಸ ಪ್ರಸಿದ್ದ ಕೆಂಚನಾಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಇತಿಹಾಸ ಪ್ರಸಿದ್ದ ಕೆಂಚನಾಲದ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ನಾಳೆ (ಜುಲೈ 30)ನಡೆಯಲಿದೆ.
ಕೆಂಚನಾಲ ಗ್ರಾಮದಲ್ಲಿ ನಡೆಯುವ ಶ್ರೀ ಮಾರಿಕಾಂಬಾ ಜಾತ್ರೆ ಇತಿಹಾಸ-ಪುರಾಣ ಪ್ರಸಿದ್ಧ ಜಾತ್ರೆ ಆಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಈ ಜಾತ್ರೆಯು ಪ್ರತಿ ವರ್ಷ ಎರಡು ಬಾರಿ ನಡೆಯುತ್ತದೆ. ಕರ್ನಾಟಕದ ಯಾವುದೇ ಭಾಗದಲ್ಲಿ ವರ್ಷದಲ್ಲಿ ಮಾರಿಕಾಂಬಾ ಜಾತ್ರೆ ಎರಡು ಬಾರಿ ನಡೆಯುವುದಿಲ್ಲ ಆದರೆ ಕೆಂಚನಾಲ ಗ್ರಾಮದಲ್ಲಿ ಮಾತ್ರ ವರ್ಷಕ್ಕೆ ಎರಡು ಬಾರಿ ಶ್ರೀ ಮಾರಿಕಾಂಬ ಜಾತ್ರೆ ನಡೆಯುತ್ತದೆ.
ಉತ್ತಮ ಆರೋಗ್ಯ ರೋಗ-ರುಜಿನಗಳು ಬರದಂತೆ. ತಾವು ಬೆಳೆದ ಕೃಷಿ ಮತ್ತು ಕೃಷಿ ಉತ್ಪನ್ನಗಳು. ಸಾಕು ಪ್ರಾಣಿಗಳ ಸಂರಕ್ಷಣೆ. ಮಕ್ಕಳಾಗದಿದ್ದರೆ ಮಕ್ಕಳಾಗುವ ಬಗ್ಗೆ ತಮ್ಮ ಇಷ್ಟಾರ್ಥಗಳು ನೆರವೇರಲಿ ಎಂದು ಭಕ್ತರು ಹರಕೆಯನ್ನು ಹೊರುತ್ತಾರೆ. ಮಾರಿಕಾಂಬ ದೇವಿಯ ದರ್ಶನದಿಂದ ಲಕ್ಷಾಂತರ ಜನರು ಒಳಿತನ್ನು ಕಂಡಿದ್ದಾರೆ, ಕಾಣುತ್ತಲೂ ಇದ್ದಾರೆ.ಹೀಗೆ ಹತ್ತು ಹಲವು ಬೇಡಿಕೆಯನ್ನು ಹೊತ್ತು ಹರಕೆ ಮಾಡಿಕೊಂಡು ಜಾತ್ರಾ ಸಮಯದಲ್ಲಿ ಹರಕೆ ತೀರಿಸಲು ಭಕ್ತ ಸಮೂಹ ಹರಿದು ಬರುವುದು ಇಲ್ಲಿನ ವಿಶೇಷವಾಗಿದೆ.
ಒಂದೇ ದಿನದಲ್ಲಿ ಸುಮಾರು ೨೫ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜಿಲ್ಲೆ ಹೊರ ಜಿಲ್ಲೆಗಳಿಂದ ಭಕ್ತರು ಬಂದು ದೇವಿಯ ದರ್ಶನಾರ್ಶೀವಾದ ಪಡೆಯುತ್ತಾರೆ.