ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ – ಒಂದೇ ಕುಟುಂಬದ 13 ಜನರ ಸಾವು

ನಿಂತಿದ್ದ ಲಾರಿಗೆ ಹಿಂಬದಿಯಿಂದ ಟಿಟಿ ಡಿಕ್ಕಿ – ಒಂದೇ ಕುಟುಂಬದ 13 ಜನರ ಸಾವು  

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಶಿವಮೊಗ್ಗ ಮೂಲದ 13 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಟಿಟಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಶಿವಮೂಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಎಮ್ಮೆಹಟ್ಟಿ ಗ್ರಾಮದ ನಿವಾಸಿಗಳು ಎಂದು ಗುರುತಿಸಲಾಗಿದೆ. ಪೂನಾ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ‌ ನಿಂತಿದ್ದ ಲಾರಿಗೆ ಹಿಂದಿನಿಂದ ಟೆಂಪೋ ಟ್ರಾವೆಲ್ಲರ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಟಿಟಿ ವಾಹನದಲ್ಲಿದ್ದವರ ಪೈಕಿ 13 ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಘಟನೆಯಲ್ಲಿ ಪರಶುರಾಮ್ ( 45 ), ಭಾಗ್ಯ (40), ನಾಗೇಶ್ ( 50) ವಿಶಾಲಾಕ್ಷಿ( 50), ಸುಭದ್ರಾ ಭಾಯಿ( 65), ಪುಣ್ಯ( 50), ಮಂಜುಳಾ ಭಾಯಿ( 57), ಆದರ್ಶ್( 23) ಡ್ರೈವರ್, ಮಾನಸಾ( 24), ರೂಪಾ( 40), ಮಂಜುಳಾ( 50), (4 ವರ್ಷ ಹಾಗೂ 6 ವರ್ಷದ ಮಕ್ಕಳು( ಹೆಸರು ತಿಳಿದು ಬರಬೇಕಿದೆ) ಮೃತಪಟ್ಟಿದ್ದಾರೆ. ಗಾಯಾಳುಗಳಾದ ಅರ್ಪಿತಾ(18) ಸೇರಿದಂತೆ ಇನ್ನೂ ಮೂವರು ಗಾಯಾಳುಗಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು ಭದ್ರಾವತಿಗೆ ಮರಳಿ ಹೋಗುತ್ತಿರುವಾಗ ತಡರಾತ್ರಿ 3.30ಗಂಟೆಗೆ ಈ ಭೀಕರ ಆಪಘಾತ ಸಂಭವಿಸಿದೆ.


ವಾಹನದಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ‌ ನಿರತರಾಗಿದ್ದಾರೆ. ಶುಕ್ರವಾರ ಬೆಳಗಿನ ಜಾವ ನಾಲ್ಕೂವರೆ ಗಂಟೆಗೆ ಈ ದುರ್ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಮೃತದೇಹಗಳನ್ನು ಹೊರೆತೆಗೆಯುವ ಕಾರ್ಯಾಚರಣೆ ನಡೆಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ನೀಡಿರುವ ಎಸ್​ಪಿ ಅಂಶುಕುಮಾರ್, ಇಬ್ಬರು ಪುಟ್ಟ ಮಕ್ಕಳಿದ್ದಾರೆ, 3-4 ವರ್ಷ ವಯಸ್ಸಿ ಇರಬಹುದು. ಉಳಿದಂತೆ 7 ಮಂದಿ ಹಿರಿಯರು ಘಟನೆಯಲ್ಲಿ ಸಾವನ್ನಪ್ಪಿದ್ದಾರೆ. ಘಟನಾ ಸ್ಥಳ ನೋಡಿದರೆ ರ್ಯಾಶ್ ಡ್ರೈವಿಂಗ್ ಕಾರಣ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಚಿಂಚೋಳಿ ದೇವಸ್ಥಾನದಲ್ಲಿ ದರ್ಶನ ಮಾಡಿ ಮನೆಗೆ ವಾಪಸ್ ಆಗುವಾಗ ಘಟನೆ ನಡೆದಿದೆ. ಸದ್ಯ ಘಟನೆಯಲ್ಲಿ ಗಾಯಗೊಂಡಿರುವ ಇಬ್ಬರು ಆಸ್ಪತ್ರೆಗೆ ದಾಖಲಿಸಲಾಗಿದೆ, ಮುಂದಿನ ತನಿಖೆಯನ್ನು ಮಾಡ್ತೇವೆ ಎಂದು ತಿಳಿಸಿದ್ದಾರೆ.

ಇನ್ನು, ಅಪಘಾತದಲ್ಲಿ ಓರ್ವ ಬಾಲಕ ಸಿಟಿನ ಕೆಳ ಭಾಗದಲ್ಲಿ ಸಿಕ್ಕಿ ಹಾಕಿಕೊಂಡಿದ್ದ. ವಾಹನ ಎಲ್ಲಾ ಸೀಟ್ ಬ್ರೇಕ್ ಹಾಕಿತ್ತು. ಘಟನೆ ನೋಡಿದ ಕೂಡಲೇ ನಮಗೆ ಶಕ್ತಿಯೇ ಕುಸಿತವಾಗಿತ್ತು. ಶೀಘ್ರ ಅವರನ್ನು ರಕ್ಷಣೆ ಮಾಡಬೇಕು ಎಂದು ಸೀಟ್​​ಗಳ ತೆರವು ಮಾಡಿ ನೋಡಿದಾಗ ಮೂವರು ಜೀವಂತವಾಗಿದ್ದರು. ಇದರಲ್ಲಿ ಬಾಲಕನೋರ್ವ ಕೂಡ ಇದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದೇವೆ. ಒಟ್ಟು 15 ಮಂದಿ ಟಿಟಿ ವಾಹನದಲ್ಲಿ ಇದ್ರು ಎಂದು 108 ಆಯಂಬುಲೆನ್ಸ್ ಚಾಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *