ಪರಿಷತ್ ಚುನಾವಣೆಯಲ್ಲಿ NDA ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ – ಹರತಾಳು ಹಾಲಪ್ಪ
ರಿಪ್ಪನ್‌ಪೇಟೆ : ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಹೇಳಿದರು.
ಪಟ್ಟಣದ ಸಾಗರ ರಸ್ತೆಯ ರಾಮಮಂದಿರದಲ್ಲಿ ಆಯೋಜಿಸಲಾದ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಬಸವಣ್ಣನವರ ಅನುಭವ ಮಂಟಪದ ಆಧಾರದ ಮೇಲೆ ಕಾರ್ಯನಿರ್ವಹಿಸುವ ವಿಧಾನ ಪರಿಷತ್ ನಲ್ಲಿ ದೇಶದ ಬಗ್ಗೆ ಜ್ಞಾನವಿರುವ , ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವಂತಹ ಬೋಜೆಗೌಡ ಹಾಗೂ ಡಾ ಧನಂಜಯ ಸರ್ಜಿ ಯಂತವರನ್ನು ಗೆಲ್ಲಿಸಬೇಕಾಗಿದೆ ಎಂದರು.
ಇದೇ ಜೂನ್ 3 ರಂದು ನಡೆಯುವ ರಾಜ್ಯ ವಿಧಾನಪರಿಷತ್ ಚುನಾವಣೆಯಲ್ಲಿ ತಾವು ಎನ್.ಡಿ.ಎ ಪಕ್ಷದಿಂದ ಸ್ಪರ್ಧಿಸಿರುವ ಎನ್ ಡಿ ಎ ಮೈತ್ರಿ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ನೀಡಿ ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ನೈರುತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಸ್.ಎಲ್.ಭೋಜೆಗೌಡ ಮಾತನಾಡಿ ನಮ್ಮ ರಾಜ್ಯದ ಶಿಕ್ಷಣ ವ್ಯವಸ್ಥೆ ಒಕ್ಕಾಲು ವಿದ್ಯೆ ಮುಕ್ಕಾಲು ಬುದ್ದಿ’ ಎಂಬ ಗಾದೆ ಮಾತಿನಂತಾಗಿದೆ ಪ್ರತಿ ವರ್ಷ ಶಾಲಾ-ಕಾಲೇಜ್‌ಗಳು ಆರಂಭವಾಗುವ ಮುನ್ನವೇ ಪಠ್ಯ ಪುಸ್ತಕಗಳನ್ನು ನೀಡಲಾಗುತಿತ್ತು ರಾಜ್ಯದ ಕಾಂಗ್ರೆಸ್ ಸರ್ಕಾರ ಪಠ್ಯ ಪುಸ್ತಕ ವಿಚಾರದಲ್ಲಿ ಅನೇಕ ಗೊಂದಲ ಮಾಡಿಕೊಂಡಿದೆ. ಇನ್ನೂ ಶೈಕ್ಷಣಿಕವಾಗಿ ಶಿಕ್ಷಣದ ವಿಚಾರದಲ್ಲಿ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ ಎಂದು ಹೇಳಿದರು.
ಈ ಬಾರಿಯ ಚುನಾವಣೆಯಲ್ಲಿ ನನಗೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಡಾ ಧನಂಜಯ ಸರ್ಜಿರವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.
ಪದವೀಧರರ ಕ್ಷೇತ್ರದ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಮಾತನಾಡಿ, ನೈರುತ್ಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ 85 ಸಹಸ್ರ ಮತದಾರರನ್ನು ಹೊಂದಿದ್ದು ನನಗೆ ನನ್ನ ವೈದ್ಯಕೀಯ ಸೇವೆಯೊಂದಿಗೆ ರಾಜಕೀಯ ಕ್ಷೇತ್ರ ಹೊಸದು ಇರಬಹುದು. ಆದರೆ ರಾಜಕೀಯ ಕ್ಷೇತ್ರದಲ್ಲಿ ತಾವು ನೀಡುವ ಜವಾಬ್ದಾರಿಯನ್ನು ಶಕ್ತಿ ಮೀರಿ ಮಾಡುವುದರೊಂದಿಗೆ ಜನ ಸೇವೆಗೂ ಅವಕಾಶ ಮಾಡಲು ನನಗೆ ಆಶೀರ್ವಾದ ಮಾಡಿ ಎಂದರು.
ರಾಜ್ಯದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಿಕ್‌ಪಾಕೇಟ್ ಸರ್ಕಾರವಾಗಿದ್ದು ಇದನ್ನು ತೊಲಗಿಸ ಬೇಕಾಗಿದೆ. ಅಲ್ಲದೆ ಓಬಿಸಿ ಮತ್ತು ಇ.ಎಸ್.ಐ ಹೆಚ್ಚಿಸುವ ಬಗ್ಗೆ ಪರಿಷತ್‌ನಲ್ಲಿ ಧ್ವನಿಯಾಗಿ ಕೆಲಸ ಮಾಡಲು ನಮಗೆ ಬೆಂಬಲಿಸುವಂತೆ ಪದವೀಧರರಲ್ಲಿ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಎಸ್.ಎಲ್.ಭೋಜೆಗೌಡರಿಗೆ ಈ ಚುನಾವಣೆಯಲ್ಲಿ ಚಿಹ್ನೆ ಇರುವುದಿಲ್ಲ. ನಮ್ಮ ಹೆಸರಿನ ಮುಂದೆ ತಾವು ‘ಗೆರೆ’ ಎಳೆಯುವ ಮೂಲಕ ಮತ ಹಾಕುವಂತೆ ಮನವಿ ಮಾಡಿದರು.
ಪಕ್ಷದ ಹಿರಿಯರು ನೀಡಿರುವ ಜವಾಬ್ದಾರಿಯನ್ನು ಯಾವುದೇ ಕಪ್ಪು ಚುಕ್ಕಿ ಬಾರದಂತೆ ಸಮರ್ಥವಾಗಿ ನಿರ್ವಹಿಸುವ ಮೂಲಕ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದಲ್ಲಿ ಸಮಸ್ಯೆಗಳಿಗೆ ಪರಿಷತ್‌ನಲ್ಲಿ ಧ್ವನಿಯಾಗಿ ಕೆಲಸ ಮಾಡುವುದಾಗಿ ಹೇಳಿ ತಾವು ನಮಗೆ ಮತ ನೀಡಿ ಬೆಂಬಲಿಸಿ ಎಂದರು.
ಸಭೆಯ ಅಧ್ಯಕ್ಷತೆಯನ್ನು ಬಿಜೆಪಿ ಮಹಾಶಕ್ತಿಕೇಂದ್ರದ ಆಧ್ಯಕ್ಷ ಎನ್.ಸತೀಶ್ ವಹಿಸಿದ್ದರು.
ಮಾಜಿ ಗೃಹ ಸಚಿವ ಹಾಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಸಚಿವ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎನ್.ವರ್ತೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಬಿಜೆಪಿ ಮುಖಂಡ ಕೆರೆಕೈ ಪ್ರಸನ್ನ, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.