ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ವೇಳೆ ಮಾತಿನ ಚಕಮಕಿ – ಠಾಣೆ ಮೆಟ್ಟಿಲೇರಿದ ಪ್ರಕರಣ
ರಿಪ್ಪನ್‌ಪೇಟೆ : ಇಲ್ಲಿನ ಸಾಗರ ರಸ್ತೆಯಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಕಾಮಗಾರಿ ಸಂಧರ್ಭದಲ್ಲಿ ಮಾತಿನ ಚಕಮಕಿ ನಡೆದು ಎರಡು ಪ್ರತ್ಯೇಕ ದೂರು ದಾಖಲಾಗಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.
ಸಾಗರ ರಸ್ತೆಯ ಹೆಬ್ಬಾರ್ ಶಾಪಿಂಗ್ ಮಾಲ್ ಮುಂಭಾಗದಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ದುರಸ್ತಿಯಾಗಿ ಅಪಾರ ಪ್ರಮಾಣದ ನೀರು ಪೋಲಾಗುತಿತ್ತು ಈ ಬಗ್ಗೆ ಗುರುವಾರ ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ವರದಿ ಪ್ರಸಾರ ಮಾಡಲಾಗಿತ್ತು ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ತಾಪಂ ಕಾರ್ಯ ನಿರ್ವಹಣಾಧಿಕಾರಿ ನರೇಂದ್ರ ಕುಮಾರ್ ಭೇಟಿ ನೀಡಿ ಕೂಡಲೇ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಪಿಡಿಓ ಮಧುಸೂಧನ್ ರವರಿಗೆ ಸೂಚಿಸಿದ್ದರು.
ಈ ಹಿನ್ನಲೆಯಲ್ಲಿ ಗುರುವಾರ ತಡ ರಾತ್ರಿ ಜೆಸಿಬಿ ಯಂತ್ರದ ಮೂಲಕ ಕಾಮಗಾರಿ ಪ್ರಾರಂಭಿಸಿದಾಗ ಕಟ್ಟಡದ ಮಾಲೀಕರು ಮಾಹಿತಿ ನೀಡದೇ ಏಕಾಏಕಿ ಕಾಮಗಾರಿ ಕೈಗೊಂಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂಧರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಆದೇಶದ ಮೇರೆಗೆ ಕಾಮಗಾರಿ ಕೈಗೊಂಡಿರುವುದಾಗಿ ಪಿಡಿಓ ಸಮರ್ಥನೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕಟ್ಟಡದ ಮಾಲೀಕರು ಹಾಗೂ ಸ್ಥಳದಲ್ಲಿದ್ದ ಗ್ರಾಪಂ ಮಾಜಿ ಉಪಾಧ್ಯಕ್ಷ ,ಸಾಮಾಜಿಕ ಹೋರಾಟಗಾರ ರವೀಂದ್ರ ಕೆರೆಹಳ್ಳಿ ನಡುವೆ ಮಾತಿನ ಚಕಮಕಿ ನಡೆದು ರವೀಂದ್ರ ಕೆರೆಹಳ್ಳಿ ಮೇಲೆ ಹಲ್ಲೆ ,ಹಾಗೂ ಬೆದರಿಕೆ ಹಾಕಿರುವ ವೀಡಿಯೋ ವೈರಲ್ ಆಗಿದೆ.
ಇದೇ ಸಂಧರ್ಭದಲ್ಲಿ ಗ್ರಾಪಂ ಪಿಡಿಓ ಮಧುಸೂಧನ್ ,ಬಿಲ್ ಕಲೆಕ್ಟರ್ ನಾಗೇಶ್ ಮೇಲೆ ಕಟ್ಟಡದ ಮಾಲೀಕ ಹಾಗೂ ಅವರ ಮಕ್ಕಳು ಹೌಹಾರಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕರು ರವೀಂದ್ರ ಕೆರೆಹಳ್ಳಿ ವಿರುದ್ದ ಅವಾಚ್ಯ ಪದ ಬಳಸಿದ ಬಗ್ಗೆ ದೂರು ನೀಡಿದ್ದು , ಬೆದರಿಕೆ ಹಾಗೂ ಹಲ್ಲೆಗೆ ಯತ್ನಿಸಿದ್ದಾರೆ ಎಂದು ರವೀಂದ್ರ ಕೆರೆಹಳ್ಳಿ ಕಟ್ಟಡದ ಮಾಲೀಕರ ವಿರುದ್ದ ದೂರು ಸಲ್ಲಿಸಿದ್ದಾರೆ.