POSTMAN NEWS ವರದಿಗೆ ಎಚ್ಚೆತ್ತ ಅಧಿಕಾರಿಗಳು – ಅನಧಿಕೃತ ಕಟ್ಟಡ ತೆರವಿಗೆ ಮಾಲೀಕರಿಗೆ ವಾರ್ನಿಂಗ್
ರಿಪ್ಪನ್‌ಪೇಟೆ ; ಪಟ್ಟಣದ ಅಭಿವೃದ್ಧಿಯ ಹಿನ್ನಲೆಯಲ್ಲಿ ಜನಪ್ರತಿನಿಧಿಗಳ ವಿಶೇಷ ಆಸಕ್ತಿಯಿಂದ ರಸ್ತೆಗಳನ್ನು ಅಗಲೀಕರಣಗೊಳಿಸಿ ಪಟ್ಟಣವನ್ನು ಸುಂದರವನ್ನಾಗಿಸುವ ಪ್ರಯತ್ನದ ಮೊದಲ ಹಂತವಾಗಿ ಸಾಗರ ರಸ್ತೆ ಅಗಲೀಕರಣ ಕಾಮಗಾರಿ ಸುಮಾರು 5.50 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿದೆ. ಈ ಅಭಿವೃದ್ಧಿ ಕೆಲಸಕ್ಕೆ ಪಟ್ಟಣದ ಶೇ 99%ರಷ್ಟು ಕಟ್ಟಡ ವಾರಸುದಾರರು ಸ್ವಯಂ ಪ್ರೇರಣೆಯಿಂದ ಕಟ್ಟಡ ತೆರವುಗೊಳಿಸಿದ್ದಾರೆ ಆದರೆ ಬೆರಳಣಿಕೆ ವ್ಯಾಪಾರಸ್ಥರು ಮಾತ್ರ ತೆರವುಗೊಳಿಸುವುದಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವ ಕುರಿತು ಪೋಸ್ಟ್ ಮ್ಯಾನ್ ನ್ಯೂಸ್ ನಲ್ಲಿ ವರದಿ ಮಾಡಲಾಗಿತ್ತು.
ವರದಿ ಪ್ರಸಾರವಾದ ಬೆನ್ನಲ್ಲೇ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಪಟ್ಟಣದ ಗ್ರಾಪ ಪಿಡಿಓ ಮಧುಸೂಧನ್ ಬುಧವಾರ ಸಾಗರ ರಸ್ತೆಯಲ್ಲಿ ಸಿಬ್ಬಂದಿಗಳೊಂದಿಗೆ ಅನಧಿಕೃತ ಕಟ್ಟಡದ ಅಳತೆಯನ್ನು ಮಾಡಿ ಕಟ್ಟಡದ ಮಾಲೀಕರಿಗೆ ಕೂಡಲೇ ಕಟ್ಟಡ ತೆರವುಗೊಳಿಸಿ ಅಭಿವೃದ್ಧಿ ಕಾರ್ಯಕ್ಕೆ ಕೈ ಜೋಡಿಸುವಂತೆ ವಾರ್ನಿಂಗ್ ನೀಡಿದ್ದಾರೆ ಅದಕ್ಕೆ ಕಟ್ಟಡದ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ರಿಪ್ಪನ್‌ಪೇಟೆ ಪಟ್ಟಣದ ಸಾಗರ ರಸ್ತೆಯಲ್ಲಿರುವ ಗಾಯತ್ರಿ ಚಂದ್ರಪ್ಪ ಎಂಬುವವರ ಮಾಲೀಕತ್ವದ ಗಣೇಶ್ ಸ್ಟೀಲ್ ಅಂಡ್ ಹೋಮ್ ಅಪ್ಲಾಯನ್ಸ್ ಅಂಗಡಿಯ ಕಟ್ಟಡ ರಸ್ತೆ ಕಾಮಗಾರಿಗೆ ಅಡ್ಡಲಾಗಿ ಇರುವುದರಿಂದ ಕಾಮಗಾರಿ ಕುಂಠಿತವಾಗಿತ್ತು ಈ ಬಗ್ಗೆ PM ನ್ಯೂಸ್ ಸವಿಸ್ತರಾದ ವರದಿ ಮಾಡಿತ್ತು.
ನಮ್ಮ ವರದಿಗೆ ಸ್ಪಂದಿಸಿ ತತ್ತಕ್ಷಣ ಕಾರ್ಯೊನ್ಮುಖರಾದ ಅಧಿಕಾರಿಗಳು ಮುಂದಿನ ದಿನಗಳಲ್ಲಿ ವಿನಾಯಕ ವೃತ್ತ ಸೇರಿದಂತೆ ತೀರ್ಥಹಳ್ಳಿ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿರುವ ಕೆಲವು ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುತ್ತಾರ ಎಂದು ಕಾದುನೋಡಬೇಕಾಗಿದೆ.