Headlines

Ripponpete | ಪಾಪದ ಜೀವಕ್ಕಾಗಿ ಮಿಡಿದ ರಿಪ್ಪನ್‌ಪೇಟೆ ಪೊಲೀಸ್ ಮತ್ತು ಅರಣ್ಯ ಇಲಾಖೆ

Ripponpete | ಪಾಪದ ಜೀವಕ್ಕಾಗಿ ಮಿಡಿದ ರಿಪ್ಪನ್‌ಪೇಟೆ ಪೊಲೀಸ್ ಮತ್ತು ಅರಣ್ಯ ಇಲಾಖೆ 


ರಿಪ್ಪನ್‌ಪೇಟೆ : ಸಾಮಾಜಿಕ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ಪಟ್ಟಣದ ಪೊಲೀಸರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು “ಪಕ್ಷಿಗಳಿಗೆ ನೀರುಣಿಸಿ – ಪಕ್ಷಿ ಸಂಕುಲ ಉಳಿಸಿ” ಎಂಬ ಘೋಷ ವಾಕ್ಯದಡಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ನೀರು,ಕಾಳು ಮತ್ತು ತೊಟ್ಟಿಯನ್ನು ಹಿಡಿದುಕೊಂಡು ಕಾಡಿಗೆ ತೆರಳಿ ಬಿಸಿಲಿನಿಂದ ನೀರಿಲ್ಲದೇ ಪರಿತಪಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಮಹತ್ಕಾರ್ಯಕ್ಕೆ ಮುಂದಾಗಿದ್ದಾರೆ.

ಹೌದು.. ಬಿಸಿಲಿನ ತಾಪಕ್ಕೆ ಭೂಮಿ ಕೆಂಡದಂತೆ ಸುಡುತ್ತಿದೆ. ನೀರಿನ ಮೂಲಗಳು ಬತ್ತಿ ಬರಿದಾಗುತ್ತಿವೆ. ಪ್ರತಿನಿತ್ಯ ಜಲಕ್ಕಾಗಿ ಹೋರಾಟ  ನಡೆಸುವ ಪರಿಸ್ಥಿತಿಗೆ ನಾವು ಬಂದು ತಲುಪಿದ್ದೇವೆ. ಹಾಗೆಯೇ ಒಂದು ಕ್ಷಣ ಬೇಸಗೆಯಲ್ಲಿ ಪ್ರಾಣಿ-ಪಕ್ಷಿಗಳ ಸ್ಥಿತಿಯ ಬಗ್ಗೆ ಯೋಚಿಸಲೇ ಬೇಕಲ್ಲವಾ.. ನೀರಿನ ಮೂಲಗಳು ಬರಿದಾಗಿರುವಾಗ ಇವುಗಳ ಬಾಯಾರಿಕೆ ನೀಗಲು ನೆರವಾಗುವವರು ಯಾರು..? ಯಾವುದೇ ಜೀವಿಗಾದರೂ ಅವುಗಳ ದೇಹದ ತೂಕಕ್ಕೆ ತಕ್ಕಂತೆ ನಿರ್ದಿಷ್ಟ ಪ್ರಮಾಣದ ನೀರು ಕುಡಿಯಲೇಬೇಕು. ಮನುಷ್ಯ ಕಷ್ಟಪಟ್ಟಾದರು ಕುಡಿಯಲು ನೀರು ದಕ್ಕಿಸಿಕೊಳ್ಳುತ್ತಾನೆ. ಆದರೆ ಪ್ರಾಣಿ-ಪಕ್ಷಿಗಳ ಪಾಡು ಹೇಳತೀರದು. ಅವು ನೀರು ಸಿಗದೆ ಕೆಲವೊಮ್ಮೆ ಸಾವನ್ನಪ್ಪುತ್ತವೆ. ಆದ್ದರಿಂದ ಇಂತಹ ಪ್ರಾಣಿ – ಪಕ್ಷಿಗಳ ದಾಹ ನೀಗುವ ಕುರಿತು ಮನುಷ್ಯರಾದ ನಾವು ಸ್ವಲ್ಪ ಯೋಚಿಸಬೇಕಿದೆ.


ಈ ಹಿನ್ನಲೆಯಲ್ಲಿ ಪಕ್ಷಿಗಳಿಗೆ ನೀರುಣಿಸಿ – ಪಕ್ಷಿ ಸಂಕುಲ ಉಳಿಸಿ ಎಂಬ ಘೋಷ ವಾಕ್ಯದಡಿಯಲ್ಲಿ ರಿಪ್ಪನ್‌ಪೇಟೆ ಪೊಲೀಸ್ ಇಲಾಖೆ ,ಅರಣ್ಯ ಇಲಾಖೆ ಹಾಗೂ ಪೋಸ್ಟ್ ಮ್ಯಾನ್ ಬಳಗದ ವತಿಯಿಂದ ಪಕ್ಷಿಗಳಿಗೆ ನೀರುಣಿಸುವ ಅಭಿಯಾನಕ್ಕೆ ಪಿಎಸ್‌ಐ ನಿಂಗರಾಜ್ ಕೆ ವೈ ಚಾಲನೆ ನೀಡಿದರು.

ಕರ್ತವ್ಯದ ಒತ್ತಡದ ನಡುವೆಯೂ ರಿಪ್ಪನ್‌ಪೇಟೆ ಪಿಎಸ್‌ಐ ನಿಂಗರಾಜ್ ಕೆ ವೈ ನೇತ್ರತ್ವದ ಸಿಬ್ಬಂದಿಗಳ ತಂಡ ,ಅರಣ್ಯ ಅಧಿಕಾರಿ ಅಕ್ಷಯ್ ನೇತ್ರತ್ವದ ಸಿಬ್ಬಂದಿಗಳ ತಂಡ ಪಟ್ಟಣದ ಸರ್ಕಾರಿ ಕಛೇರಿಗಳಲ್ಲಿ, ಮೀಸಲು ಅರಣ್ಯ ಪ್ರದೇಶವಾದ ಕಣಬಂದೂರು, ಮುಗುಡ್ತಿ,ಕಾರಗೋಡು ಹಾಗೂ ವರಾನಹೊಂಡ ಅರಣ್ಯ ಪ್ರದೇಶದಲ್ಲಿ ಗಿಡಮರಗಳಿಗೆ ತೊಟ್ಟಿಗಳನ್ನು ಅಳವಡಿಸಿ, ನೀರು ತುಂಬಿ ಪಕ್ಷಿಗಳಿಗೆ  ನೀರುಣಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಈ ಸಂಧರ್ಭದಲ್ಲಿ ಮಾತನಾಡಿದ ಪಿಎಸ್‌ಐ ನಿಂಗರಾಜ್ ಕೆ ವೈ ಮಲೆನಾಡು ಭಾಗದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದು ಪ್ರಾಣಿ ಪಕ್ಷಿಗಳಿಗೆ ಎಲ್ಲೂ ಕೂಡ ನೀರು ಸಿಗುವ ಅವಕಾಶ ಇಲ್ಲದಂತಾಗಿದ್ದು, ಇದನ್ನು ಮನಗಂಡು ನಮ್ಮ ಕೈಲಾದಂತಹ ಸಣ್ಣ ಸೇವೆಯನ್ನು ಮಾಡುವಂತೆ ಯೋಚನೆ ಮಾಡಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಸೂಚನೆ ಮೇರೆಗೆ ಈ ಕಾರ್ಯಕ್ರಮ ಹಮ್ಮಿಕೊಂಡಿರುತ್ತೇವೆ. ಸಾರ್ವಜನಿಕರು ತಮ್ಮ ತಮ್ಮ ಮನೆಯ ಸುತ್ತಮುತ್ತ ನೀರಿನ ತೊಟ್ಟಿಗಳನ್ನು ಅಳವಡಿಸುವ ಮೂಲಕ ಪ್ರಾಣಿ ಪಕ್ಷಿಗಳ ಸಂಕುಲಕ್ಕೆ ನೀರು ಉಣಿಸುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂತಹ ಕೆಲಸಗಳನ್ನು ಸಾರ್ವಜನಿಕರು ಮಾಡಿದರೆ ಮೂಕ ಪ್ರಾಣಿ, ಪಕ್ಷಿಗಳು ಬೇಸಿಗೆಯ ದಾಹದಿಂದ ಮುಕ್ತಿಹೊಂದಲು ಸಾಧ್ಯವಾಗುತ್ತದೆ. ನಾವು ಮಾಡುವ ಚಿಕ್ಕದೊಂದು ಕಾರ್ಯದಿಂದ ಒಂದೇ ಒಂದು ಪಕ್ಷಿಯ ದಾಹ ತಣಿದರೂ ಅದು ಮಹತ್ಕಾರ್ಯವೇ ಎಂದರು.

ಅರಣ್ಯ ಅಧಿಕಾರಿ ಅಕ್ಷಯ್ ಕುಮಾರ್ ಮಾತನಾಡಿ ಈ ವರ್ಷ ಭೀಕರ ಬರಗಾಲ ಎದುರಾಗಿದೆ. ಎಲ್ಲೆಡೆ ಕುಡಿಯುವ ನೀರಿನ ಸಮಸ್ಯೆಯಂತೂ ಹೇಳತೀರದು. ಜೊತೆಗೆ ದಿನನಿತ್ಯದ ಬಳಕೆಗೆ, ಕೃಷಿಗೆ ನೀರಿನ ಅಭಾವ ಉಂಟಾಗಿದೆ. ಮನುಷ್ಯರು ಅಷ್ಟೆ ಅಲ್ಲ ಪ್ರಾಣಿ ಪಕ್ಷಿಗಳೂ ಕುಡಿಯಲು ನೀರು ಸಿಗದೇ ಒದ್ದಾಡುತ್ತಿವೆ.ದಯೆಯೇ ಧರ್ಮದ ಮೂಲವಯ್ಯ ಎಂಬ ನುಡಿಮುತ್ತಿನಂತೆ ಸಾರ್ವಜನಿಕರು ಪ್ರಾಣಿ ಪಕ್ಷಿಗಳಿಗೆ ನೀರುಣಿಸಿ ನೆರವಾಗಬೇಕು ಎಂದರು.

ಈ ಸಂಧರ್ಭದಲ್ಲಿ ಪೋಸ್ಟ್ ಮ್ಯಾನ್ ನ್ಯೂಸ್ ನ ರಫ಼ಿ ರಿಪ್ಪನ್‌ಪೇಟೆ, ಸೆಬಾಸ್ಟಿಯನ್ , ಆನಂದ್ ಮೆಣಸೆ , ಅರಣ್ಯ ಇಲಾಖೆಯ ಭರತ್ ಹಾಗೂ ಹರೀಶ್ ಸಿಬ್ಬಂದಿಯವರಾದ ನಾಗರಾಜ್ ಮತ್ತು ಯಶ್ವಂತ್, ಪೋಲಿಸ್ ಇಲಾಖೆ ಸಿಬ್ಬಂದಿಗಳಾದ ಉಮೇಶ್, ಯೋಗೇಂದ್ರ,ಪ್ರವೀಣ್, ಶಿವಕುಮಾರ್ ನಾಯಕ್, ಮಧುಸೂಧನ್ ಹಾಗೂ ಇನ್ನಿತರರಿದ್ದರು.

———————————

ಬಿಸಿಲಿನಿಂದ ನೀರಿಲ್ಲದೇ ಪರಿತಪಿಸುತ್ತಿರುವ ಪ್ರಾಣಿ ಪಕ್ಷಿಗಳಿಗೆ ನೀರುಣಿಸುತ್ತಿರುವ ಅಧಿಕಾರಿಗಳ ಸೇವೆ ಮೆಚ್ಚುವಂತದ್ದು, ಕೆಲವೆಡೆ ನೀರಿಲ್ಲದೇ ಅನೇಕ ಪಕ್ಷಿಗಳು ಸಾವನ್ನಪ್ಪಿದ ವರದಿಗಳು ಆಗಿವೆ. ಹೀಗಾಗಿ ನೀವಿರುವ ಜಾಗದ ಸುತ್ತಮುತ್ತಲು, ಪಕ್ಷಿಗಳು ಬಂದು ಹೋಗುವ ಜಾಗಗಳಲ್ಲಿ ನೀರಿನ ವ್ಯವಸ್ಥೆ ಮಾಡಿ. ಇದು ಪೋಸ್ಟ್ ಮ್ಯಾನ್ ನ್ಯೂಸ್ ನ ಕಳಕಳಿಯೂ ಕೂಡ.

ಹೀಗೆ ನೆರವಾಗಬಹುದು

ಮನೆಯ ಸಮೀಪ ಅಥವಾ ಇತರ ಸ್ಥಳಗಳಲ್ಲಿ ತೊಟ್ಟಿ ನಿರ್ಮಿಸಿ ಅಥವಾ ಪಾತ್ರೆಗಳಲ್ಲಿ ನೀರು ಸಂಗ್ರಹಿಸಿಟ್ಟರೆ ಪ್ರಾಣಿ – ಪಕ್ಷಿಗಳು ತಮ್ಮ ಜಲದಾಹ ತೀರಿಸಿಕೊಳ್ಳುತ್ತವೆ ಹಾಗೂ ಪಕ್ಷಿಗಳಿಗೆ ಮನೆಯ ಛಾವಣಿಯ ಮೇಲೆ, ಇತರ ತೆರೆದ ಸ್ಥಳಗಳಲ್ಲಿ ಬಾಟಲಿ, ಕುಂಡಗಳಲ್ಲಿ ನೀರು ಹಾಕಿಡಬಹುದು. ನೀರಿನ ಜತೆಗೆ ಸ್ವಲ್ಪ ಅಕ್ಕಿ ಮುಂತಾದ ಆಹಾರ ಧಾನ್ಯಗಳನ್ನು ಇಟ್ಟರೆ ಪಕ್ಷಿಗಳಿಗೆ ಅನುಕೂಲವಾಗುತ್ತದೆ.

Leave a Reply

Your email address will not be published. Required fields are marked *