Ripponpete | ಪುನೀತ್‌ ಅಭಿಮಾನಕ್ಕಾಗಿ ಸೈಕಲ್‌ನಲ್ಲಿ ದೇಶ ಪರ್ಯಟನೆ ಕೈಗೊಂಡಿರುವ ತಮಿಳು ಅಭಿಮಾನಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ

Ripponpete | ಪುನೀತ್‌ ಅಭಿಮಾನಕ್ಕಾಗಿ ಸೈಕಲ್‌ನಲ್ಲಿ ದೇಶ ಪರ್ಯಟನೆ ಕೈಗೊಂಡಿರುವ ತಮಿಳು ಅಭಿಮಾನಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ


ಪವರ್‌ ಸ್ಟಾರ್‌ ಪುನೀತ್‌ ರಾಜಕುಮಾರ್‌ (Puneeth Rajkumar) ಅಗಲಿ ಸರಿಸುಮಾರು ಎರಡು ವರ್ಷಕ್ಕೆ ಬಂದರೂ ಅವರ ಅಭಿಮಾನಿಗಳು ಮಾತ್ರ ಒಂದಲ್ಲಾ ಒಂದು ರೀತಿಯಲ್ಲಿ ಅವರ ಆರಾಧನೆಯನ್ನು ಮಾಡುತ್ತಲೇ ಬರುತ್ತಿದ್ದಾರೆ. ಈ ನಡುವೆ ತಮಿಳುನಾಡಿನ ಯುವಕನೊಬ್ಬ ಅಪ್ಪಟ ಅಪ್ಪು ಅಭಿಮಾನಿ ಆಗಿದ್ದು, ಪುನೀತ್‌ ಸಲುವಾಗಿ ತಮಿಳುನಾಡಿನಿಂದ ಸೈಕಲ್ ಪ್ರಯಾಣವನ್ನು ಆರಂಭಿಸಿದ್ದು, ದೇಶ ಪರ್ಯಟನೆಯನ್ನು ಮಾಡುತ್ತಿದ್ದಾನೆ.


ಮುತ್ತುಸಲ್ವನ್ (Tamilian Muthusalvan) ಎಂಬ ಪುನೀತ್‌ ಅಭಿಮಾನಿ ಈಗ ಸೈಕಲ್‌ ಮೂಲಕ ದೇಶ ಸುತ್ತುತ್ತಿರುವ ಯುವಕ. ಸೈಕಲ್‌ (Cycle Trip)‌ ಮೂಲಕವೇ ದೇಶವನ್ನು ಸುತ್ತುವ ಸಂಕಲ್ಪ ಮಾಡಿರುವ ಮುತ್ತುಸಲ್ವನ್, ಈಗಾಗಲೇ 3 ವರ್ಷದಲ್ಲಿ ಸಂಪೂರ್ಣವಾಗಿ ಉತ್ತರ ಭಾರತ ಹಾಗೂ ನೇಪಾಳ ಸುತ್ತಿ ಬಂದಿದ್ದಾನೆ.ಈತ ಪ್ರತಿಯೊಂದು ತಾಲೂಕಿನಲ್ಲಿ ಪುನೀತ್ ಹೆಸರಿನಲ್ಲಿ ಗಿಡಗಳನ್ನು ನೆಡುತ್ತಿರುವು ವಿಶೇಷವಾಗಿದೆ.

ಈಗಾಗಲೇ 20000 ಕಿಲೋ ಮೀಟರ್ ಸಂಚಾರವನ್ನು ಪೂರ್ಣಗೊಳಿಸಿದ್ದು, ಮಂಗಳವಾರ (ಡಿ . 19) ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಪಟ್ಟಣಕ್ಕೆ ಭೇಟಿ ನೀಡಿದ್ದಾನೆ.

ಪಟ್ಟಣದ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ (Puneeth Rajkumar Fans Association) ವತಿಯಿಂದ ವಿನಾಯಕ ವೃತ್ತದಲ್ಲಿ ಅಪ್ಪು ಅಭಿಮಾನಿಯಾಗಿರುವ ಮುತ್ತುಸಲ್ವನ್‌ಗೆ ಸನ್ಮಾನಿಸಿ ಗೌರವಿಸಲಾಗಿದೆ.


ನಂತರ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ಪುನೀತ್ ಅಭಿಮಾನಿಗೆ ಗೌರವಿಸಿ ಬೀಳ್ಕೊಟ್ಟರು,ಆ ನಂತರದಲ್ಲಿ ರಿಪ್ಪನ್‌ಪೇಟೆ ಗ್ರಾಪಂ ಪಿಡಿಓ ಮಧುಸೂಧನ್ ಹಾಗೂ ಸಿಬ್ಬಂದಿಗಳು ಅಪ್ಪು ಅಭಿಮಾನಿಗೆ ಸನ್ಮಾನಿಸಿ ಗೌರವಿಸಿದರು.


‌ಈ ವೇಳೆ ಪೋಸ್ಟ್ ಮ್ಯಾನ್ ನ್ಯೂಸ್ ನೊಂದಿಗೆ ಮಾತನಾಡಿದ ಮುತ್ತುಸಲ್ವನ್‌, ಪುನೀತ್ ಅಭಿಮಾನಿಯಾಗಿರುವ ನಾನು ಸೈಕಲ್ ಯಾತ್ರೆಯನ್ನು ಆರಂಭಿಸಿರುವ ಬಗ್ಗೆ ಮಾಹಿತಿಯನ್ನು ಪಡೆದಿದ್ದ ಪುನೀತ್ ಧರ್ಮಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ (Ashwini Puneeth Rajkumar) ಅವರು ನನ್ನನ್ನು ಕರೆಸಿಕೊಂಡಿದ್ದರು. ಅವರು ತಮ್ಮ ಪಿಆರ್‌ಕೆ ಪ್ರೊಡಕ್ಷನ್ಸ್‌ನ ಗಂಧದ ಗುಡಿ ಚಿತ್ರದ ಟೀ ಶರ್ಟ್ ಹಾಗೂ ಪುನೀತ್ ಬಳಕೆ ಮಾಡಿದ್ದ ಜೇಮ್ಸ್ ಚಿತ್ರದ ಕನ್ನಡಕವನ್ನು ನೀಡಿ ಶುಭ ಹಾರೈಸಿದ್ದರು ಎಂದು ತಿಳಿಸಿದ್ದಾನೆ.


ನಾನು ಈಗಾಗಲೇ ಬಹಳಷ್ಟು ರಾಜ್ಯಗಳನ್ನು ಸುತ್ತಿದ್ದೇನೆ. ಎಲ್ಲ ರಾಜ್ಯಗಳಲ್ಲಿಯೂ ರಾಜಕುಮಾರ್ ಕುಟುಂಬದ ಅಭಿಮಾನಿಗಳಿದ್ದು, ಉತ್ತಮ ರೀತಿಯಲ್ಲಿ ನನಗೆ ಶುಭ ಹಾರೈಸಿ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ನನಗೆ ಖುಷಿಯಾಗುತ್ತಿದೆ. ಈಗ ಶಿವಮೊಗ್ಗಕ್ಕೆ ಬಂದಿದ್ದೇನೆ. ಇಲ್ಲೂ ಸಹ ನನ್ನನ್ನು ಖುಷಿಯಿಂದ ನೋಡಿಕೊಂಡಿದ್ದಾರೆ ಎಂದು ಮುತ್ತುಸಲ್ವನ್‌ ಮಾಧ್ಯಮಗಳ ಮುಂದೆ ಸಂತೋಷವನ್ನು ಹಂಚಿಕೊಂಡಿದ್ದಾನೆ. ಅಲ್ಲದೆ, ಅಲ್ಪಸ್ವಲ್ಪ ಕನ್ನಡವನ್ನೂ ಮಾತನಾಡುವ ಈತ ಪುನೀತ್‌ ಬಗ್ಗೆ ಭಾರಿ ಅಭಿಮಾನವನ್ನು ಹೊಂದಿದ್ದಾನೆ.

ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ , ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ರಮೇಶ್ ಫ್ಯಾನ್ಸಿ , ರಫ಼ಿ ರಿಪ್ಪನ್‌ಪೇಟೆ , ಟಿ ಆರ್ ಕೃಷ್ಣಪ್ಪ , ಗ್ರಾಪಂ ಸದಸ್ಯ ಪ್ರಕಾಶ್ ಪಾಲೇಕರ್ , ಆದರ್ಶ್ ಹಾಗೂ ಯಲ್ಲಪ್ಪ ಇನ್ನಿತರರಿದ್ದರು.

Leave a Reply

Your email address will not be published. Required fields are marked *